ಬಿಎಸ್‍ವೈ ವಿರುದ್ಧ ಅಕ್ರಮ ಡಿ-ನೋಟಿಫೈ ಆರೋಪ: ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿದ ಕೋರ್ಟ್

Update: 2021-07-03 14:03 GMT

ಬೆಂಗಳೂರು, ಜು.3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಡಿನೋಟಿಫಿಕೇಷನ್ ಸಂಕಷ್ಟ ಎದುರಾಗಿದೆ. ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್ ಗಾಗಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ್ದ ಆರೋಪ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸರಿಯಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.

ನಗರದ ದೇವರಬೀಸನಹಳ್ಳಿ ಹಾಗೂ ಬೆಳ್ಳಂದೂರು ಕೈಗಾರಿಕಾ ಉದ್ದೇಶಕ್ಕಾಗಿ ವಶಪಡಿಸಿಕೊಂಡಿದ್ದ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 10 ಸಾವಿರ ಪುಟಗಳ ಬಿ ರಿಪೊರ್ಟ್ ಸಲ್ಲಿಸಿದ್ದರು.

ಈ ವರದಿ ಪರಿಶೀಲಿಸಿದ ನ್ಯಾಯಪೀಠ, ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಸೂಕ್ತವಾಗಿಲ್ಲ. ಹೀಗಾಗಿ, ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠ ನೀಡಿದ್ದ ಆದೇಶದ ಅನುಸಾರ ಸೂಕ್ತ ರೀತಿ ಮರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದೆ.

ದೂರುದಾರ ವಾಸುದೇವರೆಡ್ಡಿ ಪರ ವಾದ ಮಂಡಿಸಿದ್ದ ವಕೀಲ ಕೆ.ವಿ.ಧನಂಜಯ ಅವರು, ಪೊಲೀಸರು ಸೂಕ್ತವಾದ ತನಿಖೆಯನ್ನೇ ಮಾಡಿಲ್ಲ. ಬದಲಿಗೆ ಪ್ರಕರಣಕ್ಕೆ ಪೂರಕವಲ್ಲದ ರೀತಿ 10 ಸಾವಿರ ಪುಟಗಳ ವರದಿ ಸಲ್ಲಿಸಿದ್ದಾರೆ. ಡಿನೋಟಿಫೈ ಮಾಡುವ ಸರಕಾರದ ನಿಲುವಿಗೆ ಅಂದಿನ ಕೆಐಎಡಿಬಿ ಸಿಇಒ ಆಕ್ಷೇಪಿಸಿದ್ದರು. ಅಲ್ಲದೆ, ರಾಜ್ಯ ಅಡ್ವೊಕೇಟ್ ಜನರಲ್ ಕೂಡ ಸಮ್ಮತಿ ವ್ಯಕ್ತಪಡಿಸಿರಲಿಲ್ಲ. ಹೀಗಾಗಿಯೇ, ಹೈಕೋರ್ಟ್ ಕೂಡ ಪೊಲೀಸರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ, ಬಿ ರಿಪೋರ್ಟ್ ಪುರಸ್ಕರಿಸಬಾರದು ಎಂದು ಪೀಠಕ್ಕೆ ಕೋರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ಅವರಿದ್ದ ನ್ಯಾಯಪೀಠ, ಪ್ರಕರಣದ ಮುಂದುವರಿದ ತನಿಖೆಗೆ ಲೋಕಾಯುಕ್ತ ಡಿವೈಎಸ್‍ಪಿಗೆ ಆದೇಶ ನೀಡಿದರು. ಅಲ್ಲದೇ ಹೈಕೋರ್ಟ್ ಆದೇಶ ಪರಿಗಣಿಸಿ ತನಿಖೆಯನ್ನು ನಡೆಸಿ ಅಂತಿಮ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಏನಿದು ಪ್ರಕರಣ: 2000-2001ನೆ ಸಾಲಿನಲ್ಲಿ ನಗರದ ವೈಟ್‍ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಭೂಮಿಯನ್ನು ಐಟಿ ಕಾರಿಡಾರ್ ಆಗಿ ರಾಜ್ಯ ಸರಕಾರ ಘೋಷಿಸಿತ್ತು. ಮಾರತಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಗ್ರಾಮಗಳಲ್ಲಿನ 434 ಎಕರೆ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೆಐಎಡಿಬಿಗೆ ಅಧಿಸೂಚನೆ ಹೊರಡಿಸಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಕೆಐಎಡಿಬಿ ವಶಪಡಿಸಿಕೊಂಡಿದ್ದ ದೇವರಬೀಸನಹಳ್ಳಿಯ ಸರ್ವೇ ನಂ. 49ರ 4.30 ಎಕರೆ, ಬೆಳ್ಳಂದೂರು ಗ್ರಾಮದ ಸರ್ವೇ ನಂ.46.1ರ 1.17 ಎಕರೆ, ಸರ್ವೇ ನಂ. 18ರ 1.10 ಎಕರೆ, ಸರ್ವೇ ನಂ. 10ರ 33 ಗುಂಟೆ ಜಾಗವನ್ನು ಡಿನೋಟಿಫೈ ಮಾಡಲು ಅಕ್ರಮವಾಗಿ ಆದೇಶಿಸಿದ್ದಾರೆ ಎಂದು ಆರೋಪಿಸಿ ವಾಸುದೇವ ರೆಡ್ಡಿ ಎಂಬುವರು 2013ರ ಜು.10ರಂದು ಲೋಕಾಯುಕ್ತ ವಿಶೇಷ ಕೋರ್ಟ್‍ಗೆ ಖಾಸಗಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಕೋರ್ಟ್, ದೂರಿನಲ್ಲಿ ಮಾಡಲಾಗಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ 2015ರ ಫೆ.18ರಂದು ಆದೇಶಿಸಿತ್ತು. ಅದರಂತೆ ಪೊಲೀಸರು 2015ರ ಫೆ.21ರಂದು ಎಫ್‍ಐಆರ್ ದಾಖಲಿಸಿ, ಯಡಿಯೂರಪ್ಪ ಅವರನ್ನು ಎರಡನೆ ಆರೋಪಿಯನ್ನಾಗಿ ಮಾಡಿದ್ದರು. ಯಡಿಯೂರಪ್ಪ ಅವರು 2019ರ ಜ.25ರಂದು ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. ಹೀಗಾಗಿ, ವಿಶೇಷ ನ್ಯಾಯಾಲಯ ದೂರನ್ನು ವಿಚಾರಣೆ ಅಂಗೀಕರಿಸಿರುವುದು ಕಾನೂನು ಬಾಹಿರ ಕ್ರಮ. ಹೀಗಾಗಿ, ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ಆದರೆ, ಹೈಕೋರ್ಟ್ ಅರ್ಜಿ ವಜಾ ಮಾಡುವುದರ ಜತೆಗೆ ಸೂಕ್ತ ತನಿಖೆ ನಡೆಸದ ಲೊಕಾಯುಕ್ತ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News