ಉಪವಿದ್ಯುತ್ ವಿತರಣಾ ಕೇಂದ್ರಗಳ ತ್ವರಿತ ನಿರ್ಮಾಣಕ್ಕೆ ಗೋವಿಂದ ಕಾರಜೋಳ ಸೂಚನೆ
ಬೆಂಗಳೂರು, ಜು. 3: ಸಮರ್ಪಕ ವಿದ್ಯುತ್ ವಿತರಣೆಗಾಗಿ ಈಗಾಗಲೇ ಮಂಜೂರಾಗಿರುವ ಉಪವಿದ್ಯುತ್ ವಿತರಣೆ ಕೇಂದ್ರಗಳ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸಿ, ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಬಾಗಲಕೋಟೆ ಪ್ರಸರಣ ವಲಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಲಯದಲ್ಲಿ ಒಟ್ಟು 416 ಉಪ ವಿದ್ಯುತ್ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 135 ಉಪ ವಿದ್ಯುತ್ ವಿತರಣಾ ಕೇಂದ್ರಗಳು ಮಂಜೂರಾಗಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 21 ಉಪವಿದ್ಯುತ್ ವಿತರಣಾ ಕೇಂದ್ರಗಳು ಮಂಜೂರಾಗಿದ್ದು, ಬೆನಕಟ್ಟಿ ಮತ್ತು ಕೈನಕಟ್ಟಿ ಉಪವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ ಎಂದರು.
ವಿಜಯಪುರ ಜಿಲ್ಲೆಯ 6 ಉಪವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, 3 ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಎರಡು ಕಾಮಗಾರಿಗಳಿಗೆ ಡಿಪಿಆರ್ ಅನುಮೋದನೆ ನೀಡಲಾಗಿದೆ. 8 ಕಾಮಗಾರಿಗಳಿಗೆ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. 6 ಕಾಮಗಾರಿಗಳಿಗೆ ನಿವೇಶನವನ್ನು ಗುರುತಿಸಲಾಗಿದೆ. 11 ಕಾಮಗಾರಿಗಳಿಗೆ ನಿವೇಶನವನ್ನು ಗುರುತಿಸಬೇಕಿದೆ.
ಬೆಳಗಾವಿ ಜಿಲ್ಲೆಯ 5 ಉಪವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, 2 ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಎರಡು ಕಾಮಗಾರಿಗಳಿಗೆ ಡಿಪಿಆರ್ ಅನುಮೋದನೆ ನೀಡಲಾಗಿದೆ. 5 ಕಾಮಗಾರಿಗೆ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. 12 ಕಾಮಗಾರಿಗೆ ನಿವೇಶನವನ್ನು ಗುರುತಿಸಲಾಗಿದೆ. 10ಕಾಮಗಾರಿಗಳಿಗೆ ನಿವೇಶನವನ್ನು ಗುರುತಿಸಬೇಕಿದೆ. ಧಾರವಾಡ ಜಿಲ್ಲೆಯಲ್ಲಿ 2ಉಪವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಒಂದು ಕಾಮಗಾರಿಗೆ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದರು.
ಟ್ರಾನ್ಸ್‍ಫಾರ್ಮರ್ ಗಳನ್ನು ಎತ್ತರಿಸಿ: ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ವಿದ್ಯುತ್ ಕಂಬಗಳು, ವಿದ್ಯುತ ಪರಿವರ್ತಕ (ಟ್ರಾನ್ಸ್‍ಫಾರ್ಮರ್) ಪೆಟ್ಟಿಗೆ, ಕಂಟಕ್ಟರ್‍ಗಳು ಹಾನಿಗೊಳಗಾಗುತ್ತಿದ್ದು, ಮುಂಜಾಗ್ರತೆ ವಹಿಸಿ ಈ ವಿದ್ಯುತ್ ಪರಿಕರಗಳನ್ನು ಎತ್ತರದ ಪ್ರದೇಶದಲ್ಲಿ ಸ್ಥಾಪಿಸಿ ಹಾನಿಗೆ ಒಳಗಾಗದಂತೆ ಕ್ರಮ ವಹಿಸಿ ಎಂದು ಸೂಚಿಸಿದರು. ಸಭೆಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿದೇಶಕ ಡಾ.ಎನ್.ಮಂಜುಳ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
`ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಇತರ ನಿಗಮಗಳು ಅನುಷ್ಠಾನಗೊಳಿಸುವ `ಗಂಗಾ ಕಲ್ಯಾಣ ಯೋಜನೆ'ಯಡಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುದೀಕರಣವನ್ನು ಸಕಾಲದಲ್ಲಿ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ನೀಡುವ 50 ಸಾವಿರ ರೂ.ಅನುದಾನ ಕೊರತೆಯಾದರೆ ಇಂಧನ ಇಲಾಖೆಯಲ್ಲಿರುವ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ಈ ಯೋಜನೆಗೆ ಬಳಕೆ ಮಾಡಿಕೊಂಡು ವಿದ್ಯುದೀಕರಣ ಕಾರ್ಯವನ್ನು ಸಕಾಲದಲ್ಲಿ ಮಾಡಿದರೆ ಯೋಜನೆಯ ಉದ್ದೇಶ ಈಡೇರುತ್ತದೆ'
-ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ