ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪಿಸುವಂತೆ ರಾಜ್ಯಪಾಲರಿಗೆ ವಕೀಲರ ಪರಿಷತ್ತಿನಿಂದ ಮನವಿ
Update: 2021-07-03 21:56 IST
ಬೆಂಗಳೂರು, ಜು.3: ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಬಾಬು ಅವರ ನೇತೃತ್ವದ ಆಯೋಗವು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.
ಕಲಂ 32ರ ಪ್ರಕಾರ ನ್ಯಾಯವನ್ನು ಪಡೆಯುವುದು ಭಾರತೀಯ ಪ್ರಜೆಯ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಸುಪ್ರೀಂಕೋರ್ಟ್ ಹೊಸದಿಲ್ಲಿಯಲ್ಲಿ ಇರುವುದರಿಂದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಭಾಗದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಆರ್ಥಿಕವಾಗಿ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ನೀಡಿದರು.
18ನೆ ಕಾನೂನು ಆಯೋಗವು ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದೆ. ಆದರೂ ಈ ಬೇಡಿಕೆ ಈಡೇರಿಲ್ಲ ಎಂದು ರಾಜ್ಯಾಪಾಲರಿಗೆ ನೀಡಿರುವ ಮನವಿ ಪತ್ರದಲ್ಲಿ ಪರಿಷತ್ತಿನ ಅಧ್ಯಕ್ಷರು ಉಲ್ಲೇಖಿಸಿದ್ದಾರೆ.