ಇಥಿಯೋಪಿಯಾ: ಭೀಕರ ಕ್ಷಾಮದ ದವಡೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ; ವಿಶ್ವಸಂಸ್ಥೆ ವರದಿ

Update: 2021-07-03 16:32 GMT

ವಿಶ್ವಸಂಸ್ಥೆ, ಜು.3: ಇಥಿಯೋಪಿಯಾದ ಟಿಗ್ರೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಿದ್ದು 4 ಲಕ್ಷಕ್ಕೂ ಅಧಿಕ ಮಂದಿ ಬಾಧಿತರಾಗಿದ್ದು, 1.8 ಮಿಲಿಯನ್ ಗೂ ಹೆಚ್ಚು ಜನ ಬರಗಾಲದ ಅಪಾಯಕ್ಕೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. 

ಇಥಿಯೋಪಿಯಾದ ಫೆಡರಲ್ ಸರಕಾರ(ನೆರೆದೇಶವಾದ ಎರಿಟ್ರಿಯಾದ ಸೇನೆ ಮತ್ತು ಇಥಿಯೋಪಿಯಾದ ಅಮ್ಹಾರಾ ವಲಯದ ಹೋರಾಟಗಾರರ ಬೆಂಬಲ ಪಡೆದಿದೆ) ಹಾಗೂ ಈ ಹಿಂದೆ ಉತ್ತರ ವಲಯದಲ್ಲಿ ಅಧಿಕಾರದಲ್ಲಿದ್ದ ಟಿಗ್ರೆ ಪೀಪಲ್ಸ್ ಲಿಬರೇಷನ್ ಫ್ರಂಟ್(ಟಿಪಿಎಲ್ಎಫ್)ಗೆ ನಿಷ್ಟವಾದ ಪಡೆಗಳ ಮಧ್ಯೆ 2020ರ ನವೆಂಬರ್ನಲ್ಲಿ ಕದನ ಆರಂಭವಾದಂದಿನಿಂದ ಟಿಗ್ರೆಯಲ್ಲಿ ತೀವ್ರ ಸಂಘರ್ಷದ ಸ್ಥಿತಿಯಿದೆ. 

ಕೆಲದಿನಗಳ ಹಿಂದೆ ಟಿಗ್ರೆಯ ಪಡೆಗಳು ಪ್ರಾದೇಶಿಕ ರಾಜಧಾನಿ ಮೆಕೆಲ್ಲೆಯನ್ನು ಮರಳಿ ಕೈವಶ ಮಾಡಿಕೊಂಡಿವೆ. ಈ ಮಧ್ಯೆ, ಟಿಗ್ರೆಯ ಸಂಘರ್ಷದ ವಿಷಯದಲ್ಲಿ ವಿಶ್ವಂಸ್ಥೆಯ ಭದ್ರತಾ ಸಮಿತಿಯ ಪ್ರಥಮ ಸಭೆ ಶುಕ್ರವಾರ ನಡೆದಿದೆ. ಟಿಗ್ರೆಯಲ್ಲಿ ಕೆಲ ವಾರಗಳಲ್ಲೇ ಮತ್ತೆ 50 ಸಾವಿರಕ್ಕೂ ಅಧಿಕ ಮಂದಿ ಬರಗಾಲದ ಅಪಾಯದಲ್ಲಿರುವುದರಿಂದ ಆ ದೇಶದಲ್ಲಿರುವ ಅಮಾನವೀಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ವಿಶ್ವಸಂಸ್ಥೆಯ ನೆರವು ನಿಧಿಯ ಪ್ರಭಾರ ಮುಖ್ಯಸ್ಥ ರಮೇಶ್ ರಾಜಸಿಂಘಮ್ ಸಭೆಗೆ ತಿಳಿಸಿದರು.

 ಟಿಗ್ರೆಯಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಬರಗಾಲದ ದವಡೆಯಲ್ಲಿದ್ದು ಒಟ್ಟು 1.8 ಮಿಲಿಯನ್‌ಗೂ ಅಧಿಕ ಮಂದಿ ಬರಗಾಲಕ್ಕೆ ಸಿಲುಕುವ ಸ್ಥಿತಿಯಲ್ಲಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಯಿದೆ. 33 ಸಾವಿರದಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯ ಸಮಸ್ಯೆಯಲ್ಲಿದ್ದಾರೆ . 2 ಮಿಲಿಯನ್ ಜನತೆ ಸ್ಥಳಾಂತರಗೊಂಡಿದ್ದು ಇನ್ನೂ ಸುಮಾರು 5.2 ಮಿಲಿಯನ್ ಜನರಿಗೆ ಮಾನವೀಯ ನೆರವಿನ ಅಗತ್ಯವಿದೆ . ಇವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಿದೆ. ಆಹಾರದ ಅಭದ್ರತೆ ಮತ್ತು ಆಹಾರದ ಕೊರತೆಯ ಸಮಸ್ಯೆ ಎದುರಾಗಿದೆ ಎಂದವರು ಹೇಳಿದ್ದಾರೆ. 

ಸೋಮವಾರ ಇಥಿಯೋಪಿಯಾ ಸರಕಾರ ಏಕಪಕ್ಷೀಯ ಕದನ ವಿರಾಮ ಘೋಷಿಸಿದ್ದರೂ, ಇದೊಂದು ತಮಾಷೆ ಎಂದು ಟಿಪಿಎಲ್ಎಫ್ ತಳ್ಳಿಹಾಕಿದೆ. ಈ ವಲಯದಲ್ಲಿ ಸೋಮವಾರದಿಂದ ವಿದ್ಯುತ್ ಮತ್ತು ಸಂವಹನ ವ್ಯವಸ್ಥೆ ಮೊಟಕುಗೊಂಡಿದ್ದು ಅಲ್ಲಲ್ಲಿ ಇನ್ನೂ ಸಂಘರ್ಷ ನಡೆಯುತ್ತಿದೆ. ಮಾಜಿ ಅಧ್ಯಕ್ಷ ಡೆಬೆಸ್ಟ್ರಿಯನ್ ಗೆಬ್ರೆಮೈಕೆಲ್ ಸಹಿತ ಟಿಪಿಎಲ್ಎಫ್ ಮುಖಂಡರು ಮೆಕೆಲ್ಲೆಗೆ ಮರಳಿದ್ದಾರೆ. ನಗರದಲ್ಲಿ ಮೂಲಸೌಕರ್ಯ ನಾಶವಾಗಿದ್ದು ಯಾವುದೇ ವಿಮಾನಗಳು ಸಂಚರಿಸುತ್ತಿಲ್ಲ ಎಂದು ವಿಶ್ವಸಂಸ್ಥೆಯ ರಾಜಕೀಯ ಮತ್ತು ಶಾಂತಿಪಾಲನಾ ವ್ಯವಹಾರಗಳ ಮುಖ್ಯಸ್ಥೆ ರೋಸ್ಮೇರಿ ಡಿಕಾರ್ಲೋ ಹೇಳಿದ್ದಾರೆ. 

ಯುದ್ಧದಲ್ಲಿ ಅತ್ಯಂತ ಹೇಯ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಎರಿಟ್ರಿಯಾ ಪಡೆಗಳು ಗಡಿ ಸಮೀಪದ ಪ್ರದೇಶಕ್ಕೆ ಹಿಂದೆ ಸರಿದಿದೆ. ಅಮ್ಹರ ಪಡೆಗಳು ಪಶ್ಚಿಮ ಟಿಗ್ರೆಯಲ್ಲೇ ಉಳಿದಿದ್ದು ಶೀಘ್ರದಲ್ಲೇ ಮತ್ತಷ್ಟು ಸಂಘರ್ಷ ತಲೆದೋರುವ ಸಾಧ್ಯತೆಯಿದ್ದು ಭದ್ರತೆಯ ಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕವಿದೆ ಎಂದವರು ಹೇಳಿದ್ದಾರೆ. 

ಪಶ್ಚಿಮದ ಪ್ರದೇಶಗಳು ಈ ಹಿಂದೆ ಅಮ್ಹಾರಾದ ಭಾಗವಾಗಿದ್ದು ಇವನ್ನು ಸೂಕ್ತ ಪ್ರಕ್ರಿಯೆಯಿಲ್ಲದೆ 1990ರಲ್ಲಿ ಬಲವಂತವಾಗಿ ಟಿಗ್ರೆಗೆ ಸೇರಿಸಲಾಗಿದೆ ಎಂದು ವಿಶ್ವಂಸ್ಥೆಯಲ್ಲಿ ಇಥಿಯೋಪಿಯಾದ ರಾಯಭಾರಿ ಟೇಯ್ ಸೆಲಾಸ್ಸಿ ಆಮ್ಡೆ ಹೇಳಿದ್ದು, ಈ ಬಿಕ್ಕಟ್ಟನ್ನು ಶೀಘ್ರವೇ ಸರಕಾರದ ಗಡಿ ಸಂಘರ್ಷ ಆಯೋಗಕ್ಕೆ ವಹಿಸಲಾಗುವುದು ಎಂದಿದ್ದಾರೆ. ಟಿಗ್ರೆಯಲ್ಲಿ ಜಟಿಲ ಮತ್ತು ಅಸ್ಥಿರ ಪರಿಸ್ಥಿತಿಯಿದ್ದು, ಟಿಗ್ರೆಯನ್ ಪಡೆಗಳು ಮುಂದೊತ್ತಿ ಬರುತ್ತಿವೆ. ಕೇಂದ್ರ ಸರಕಾರ ಮತ್ತು ಎರಿಟ್ರಿಯಾ ಪಡೆಗಳು ಹಿಂದಕ್ಕೆ ಸರಿದಿದೆ. ಪ್ರಾದೇಶಿಕ ಅಮ್ಹಾರಾ ಪಡೆಗಳು ತಾವು ಈ ಪ್ರದೇಶದಿಂದ ವಾಪಾಸು ಹೋಗುವುದಿಲ್ಲ ಎಂದಿದ್ದಾರೆ. ಇವೆಲ್ಲವುದರ ಮಧ್ಯೆ ಸಿಲುಕಿರುವ ನಾಗರಿಕರು ಪರಿಸ್ಥಿತಿ ಸಹಜತೆಗೆ ಮರಳಲೆಂದು ಅಸಹಾಯಕರಾಗಿ ಕಾಯುತ್ತಿದ್ದಾರೆ ಎಂದು ಅಲ್  ಜಝೀರ ವರದಿ ಮಾಡಿದೆ. 

ಕಳೆದ ಕೆಲ ದಿನದಿಂದ ವಿಶ್ವಸಂಸ್ಥೆಯ ತಂಡ ಮೆಕೆಲ್ಲೆ, ಶಿರೆ ಮತ್ತು ಆಕ್ಸಮ್ನಲ್ಲಿದ್ದು ಅಲ್ಲಿಂದ ಇತರ ಸ್ಥಳಗಳಿಗೂ ತೆರಳುವ ಸಿದ್ಧತೆ ನಡೆಸಿದೆ. ಇದೊಂದು ರಚನಾತ್ಮಕ ಬೆಳವಣಿಗೆಯಾಗಿದೆ. 

ಮುಂದಕ್ಕೆ ತಲುಪಲು ಕಷ್ಟಸಾಧ್ಯವಾಗಿರುವ ಪ್ರದೇಶಗಳಿಗೆ ಆಹಾರದ ನೆರವು ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಆದರೆ ತಂಡದಲ್ಲಿ ಈಗ ಮೆಕೆಲ್ಲೆಯ 1 ಮಿಲಿಯನ್ ನಾಗರಿಕರಿಗೆ 1 ತಿಂಗಳಿಗೆ ಸಾಲುವಷ್ಟು ಮಾತ್ರ ಆಹಾರದ ದಾಸ್ತಾನಿದೆ ಎಂದು ವಿಶ್ವಸಂಸ್ಥೆಯ ನೆರವು ನಿಧಿಯ ಪ್ರಭಾರ ಮುಖ್ಯಸ್ಥ ರಮೇಶ್ ರಾಜಸಿಂಘಮ್ ಹೇಳಿದ್ದಾರೆ.
 
 ರಕ್ಷಣೆಯ ಬಿಕ್ಕಟ್ಟು:
 
ಟೈಗ್ರೇಯಲ್ಲಿ ಈಗ ರಕ್ಷಣೆಯ ಬಿಕ್ಕಟ್ಟಿನ ಪರಿಸ್ಥಿತಿಯಿದೆ. ಸಂಘರ್ಷದಲ್ಲಿ ಹಲವು ನಾಗರಿಕರು ಮೃತರಾಗಿದ್ದು ತೀವ್ರ ಪ್ರಮಾಣದ ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಆಧಾರಿತ ಹಿಂಸಾಚಾರದ 1200ಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಇನ್ನೂ ಹಲವು ಪ್ರಕರಣಗಳ ಬಗ್ಗೆ ವರದಿಯಾಗುತ್ತಿದೆ ಎಂದು ರಮೇಶ್ ರಾಜಸಿಂಘಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News