ದಲಿತ ಕಾಲನಿ ಸಂಪರ್ಕ ರಸ್ತೆಗೆ ಬೇಲಿ ನಿರ್ಮಿಸಿದ್ದಾರೆಂದು ಆರೋಪಿಸಿ ಕಾಲನಿ ನಿವಾಸಿಗಳಿಂದ ಧರಣಿ

Update: 2021-07-03 17:00 GMT

ಚಿಕ್ಕಮಗಳೂರು, ಜು.3: ದಲಿತರ ಕಾಲನಿ ಸಂಪರ್ಕದ ರಸ್ತೆಗೆ ಭೂಮಾಲಕರು ಗೇಟ್ ನಿರ್ಮಿಸಿಕೊಂಡು ಬೇಲಿ ಹಾಕುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾರೆ. ಈ ಸಂಬಂಧ ತಾಲೂಕು ಆಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿ ತಾಲೂಕಿನ ಬೆಟ್ಟದಮಳಲಿ ಗ್ರಾಮದ ದಲಿತ ಕಾಲನಿ ನಿವಾಸಿಗಳು ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ನಗರದ ಗಾಂಧಿಪಾರ್ಕ್ ಆವರಣದಲ್ಲಿ ಧರಣಿ ನಡೆಸಿದರು.

ವಿಶ್ವರತ್ನ ಯುವ ಸಂಘ, ಸಂವಿಧಾನ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಗರದ ಗಾಂಧಿಪಾರ್ಕ್ ಆವರಣದಲ್ಲಿ ಧರಣಿ ನಡೆಸಿದ ದಲಿತ ಕಾಲನಿ ನಿವಾಸಿಗಳು ಭೂಮಾಲಕರು, ತಾಲೂಕು ಆಡಳಿತ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಭೂಮಾಲಕರು, ಮೇಲ್ವರ್ಗದವರಿಂದ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಭೂ ಮಾಲಕರಿಂದ ದೌರ್ಜನ್ಯಕ್ಕೊಳಗಾಗುವ ದಲಿತ ಸಮುದಾದಯ ಜನರಿಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿದೆ ಎಂದು ಕಿಡಿಕಾರಿದರು.

ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿ, ಬಸರವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಬೆಟ್ಟದಮಳಲಿ ಗ್ರಾಮದಲ್ಲಿರುವ ಕುಳುವಾಡಿ ಗದ್ದೆ ಎಂಬ ದಲಿತರ ಕಾಲನಿಯಲ್ಲಿ ಸುಮಾರು 15 ಪರಿಶಿಷ್ಟಜಾತಿಗೆ ಸೇರಿದ ಕುಟುಂಬಗಳು ವಾಸವಿದ್ದು, ಈ ಕಾಲನಿ ಸಂಪರ್ಕಕ್ಕೆ ಅನಾದಿಕಾಲದಿಂದಲೂ ಸಂಪರ್ಕ ರಸ್ತೆಯೂ ಇದೆ. ಆದರೆ ಇದೇ ಗ್ರಾಮದ ಭೂಮಾಲಕರಾದ ಪರಮೇಶ್‍ಗೌಡ ಹಾಗೂ ಸೋಮೇಗೌಡ ಎಂಬವರು ದಲಿತರ ಕಾಲನಿ ಸಂಪರ್ಕ ರಸ್ತೆಗೆ ಗೇಟ್ ನಿರ್ಮಿಸಿಕೊಂಡಿದ್ದು, ಲಾಕ್‍ಡೌನ್ ಅವಧಿಯಲ್ಲಿ ರಸ್ತೆಗೆ ಬೇಲಿ ಹಾಕಿಕೊಂಡು ಸಂಪರ್ಕ ರಸ್ತೆಯನ್ನೇ ಕಬಳಿಸಿದ್ದಾರೆ ಎಂದು ಆರೋಪಿಸಿದರು.

ದಲಿತರ ಕಾಲನಿ ಸಂಪರ್ಕ ರಸ್ತೆ ಗ್ರಾಮದ ನಕಾಶೆಯಲ್ಲಿದ್ದು, ಈ ರಸ್ತೆಗೆ ಹಾಕಿರುವ ಬೇಲಿಯನ್ನು ತೆರವು ಮಾಡಬೇಕೆಂದು ಸ್ಥಳೀಯ ಬಸರವಳ್ಳಿ ಗ್ರಾಮ ಪಂಚಾಯತ್‍ನಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಆದರೆ ಭೂಮಾಲಕರು ತಮ್ಮ ಪ್ರಭಾವ ಬಳಿಸಿ ರಸ್ತೆಗೆ ಹಾಕಿರುವ ಗೇಟ್, ಬೇಲಿಯನ್ನು ತೆರವು ಮಾಡದೇ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಇದನ್ನು ಪ್ರಶ್ನಿಸುವ ದಲಿತರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದ ಮುಖಂಡರು, ಈ ದೌರ್ಜನ್ಯದ ವಿರುದ್ಧ ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ನಿವಾಸಿಗಳು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ರಸ್ತೆ ತೆರವುಗೊಳಿಸಿ ದಲಿತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡಲೇ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ದಲಿತರ ಕಾಲನಿ ಸಂಪರ್ಕಕ್ಕೆ ಇರುವ ಏಕೈಕ ರಸ್ತೆಯನ್ನು ಭೂಮಾಲಕರ ಕೈಯಿಂದ ಬಿಡಿಸಿಕೊಡಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಕಾಲನಿ ನಿವಾಸಿಗಳು ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸುವುದಾಗಿ ಇದೇ ವೇಳೆ ನಿವಾಸಿಗಳು, ಮುಖಂಡರು ಎಚ್ಚರಿಸಿದರು.

ಧರಣಿ ಬಳಿಕ ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ವಿಶ್ವರತ್ನ ಯುವ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಸಂವಿಧಾನ ರಕ್ಷಣಾ ವೇದಿಕೆ ಸಂಚಾಲಕ ಗೌಸ್ ಮೊಹಿದ್ದೀನ್, ದಸಂಸ ಮುಖಂಡ ಟಿ.ಎಲ್.ಗಣೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ತೀರ್ಥಕುಮಾರ್, ರಘು, ಸುನಿಲ್ ಹಾಗೂ ಕಾಲನಿ ನಿವಾಸಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News