ರಾಹುಲ್ ಗಾಂಧಿಗೆ ದುರಹಂಕಾರ ಮತ್ತು ಮಾಹಿತಿ ಕೊರತೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಾಗ್ದಾಳಿ
ಮೈಸೂರು,ಜು.3: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದುರಹಂಕಾರ ಮತ್ತು ಮಾಹಿತಿ ಕೊರತೆ ಇದೆ. ಹಾಗಾಗಿಯೇ ಅವರು ಲಸಿಕೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶನಿವಾರ ಭೇಟಿ ನೀಡಿದ ಅವರು, ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ನಿಧನರಾದ ಹಿನ್ನಲೆಯಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗತ್ತಿನ ಅತಿ ದೊಡ್ಡ ಲಸಿಕಾ ಕಾರ್ಯಕ್ರಮ ಭಾರತ ದೇಶದ್ದು, ಈಗಾಗಲೇ 35 ಕೋಟಿ ಅಷ್ಟು ಜನರಿಗೆ ಲಸಿಕೆ ನೀಡಿದ್ದೇವೆ. ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಲಸಿಕೆ ನೀಡಲಾಗಿದೆ. 135 ಕೋಟಿ ಜನ ಸಂಖ್ಯೆಗೆ ಒಂದೇ ದಿನದಲ್ಲಿ ಲಸಿಕೆ ನೀಡಲು ಸಾಧ್ಯವಿಲ್ಲ. ಜುಲೈ ತಿಂಗಳಲ್ಲಿ 12 ಕೋಟಿ ಜನರಿಗೆ ಲಸಿಕೆ ನೀಡುತ್ತೇವೆ ಎಂದು ಹೇಳಿದ್ದೇವೆ. ಒಂದು ತಿಂಗಳ ನಂತರ ಲಸಿಕೆ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿ ಎಂದು ಹೇಳಿದರು.
ಇಡೀ ಪ್ರಪಂಚದಲ್ಲಿರುವ ಎಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚು ಲಸಿಕೆ ನೀಡುತ್ತಿದ್ದೇವೆ. ಯಾರಿಗೆ ದುರಹಂಕಾರ ಮತ್ತು ಮಾಹಿತಿ ಇರುವುದಿಲ್ಲವೊ ಅವರು ತಪ್ಪು ಮಾಹಿತಿ ನೀಡುತ್ತಾರೆ. ದುರಹಂಕಾರ ಮತ್ತು ಮಾಹಿತಿ ಕೊರತೆಗೆ ಎಲ್ಲಿಯೂ ಲಸಿಕೆ ಕಂಡು ಹಿಡಿದಿಲ್ಲ ಎಂದು ಕಿಡಿಕಾರಿದರು.
ಈಗಾಗಲೇ ಯಾವ ರಾಜ್ಯಗಳಿಗೆ ಎಷ್ಟು ಲಸಿಕೆ ಬೇಕು ಎಂದು ಮಾಹಿತಿ ಪಡೆಯಲಾಗಿದೆ. ಅವರಿಗೆ ಒಂದು ವಾರಗಳ ಮುಂಚಿತವಾಗಿ ಎಷ್ಟು ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗುತ್ತದೆ. ಅದರ ಪ್ರಕಾರ ಅವರು ಯೋಜನೆ ಮಾಡಿಕೊಂಡು ಜನರಿಗೆ ಲಸಿಕೆ ನೀಡುತ್ತಾರೆ. ಕೆಲವರಿಗೆ ಮಾಹಿತಿ ಇಲ್ಲದೆ ಏನೇನೋ ಹೇಳುತ್ತಾರೆ ಎಂದು ಹರಿಹಾಯ್ದರು.