ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷ ವೃಷಬೇಂದ್ರಪ್ಪ
ಮೈಸೂರು,ಜು.3: ಬಿಜೆಪಿ ಪಕ್ಷಕ್ಕೆ ಬಂದರೆ ಯಾರೂ ಉದ್ಧಾರ ಆಗುವುದಿಲ್ಲ, ಹಾಗಾಗಿ ಯಾರೂ ಬಿಜೆಪಿ ಪಕ್ಷಕ್ಕೆ ಬರಬೇಡಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷ ವೃಷಬೇಂದ್ರಪ್ಪ ಸ್ವಪಕ್ಷದ ವಿರುದ್ಧವೇ ಜನರಿಗೆ ಕರೆ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿ ಮುಂಭಾಗ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷಕ್ಕಾಗಿ 30 ವರ್ಷದಿಂದ ದುಡಿದಿದ್ದೇನೆ. ಪಕ್ಷ ಕಟ್ಟಿ ಬೆಳೆಸುವಲ್ಲಿ ನನ್ನ ಮನೆಯ ದುಡ್ಡನ್ನು ಖರ್ಚು ಮಾಡಿದ್ದೇನೆ. ಆದರೆ ಬಿಜೆಪಿ ನನಗೆ ಏನೂ ಮಾಡಲಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಸಹ ನೀಡಲಿಲ್ಲ. ಹಾಗಾಗಿ ಬಿಜೆಪಿ ಪಕ್ಷ ನಂಬಿಕೊಂಡು ಯಾರೂ ಬರಬೇಡಿ ಎಂದು ಹೇಳಿದರು.
ನಾನು ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದರೂ ಚುನಾವಣೆಯಲ್ಲಿ ಒಂದೇ ಒಂದು ಟಿಕೆಟ್ ನೀಡಲಿಲ್ಲ. ಒಂದು ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಿಲ್ಲ. ಪ್ರಭಾವಿಗಳು ತಮಗೆ ಬೇಕಾದವರಿಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಹಾಳಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
30 ವರ್ಷದಿಂದ ಪಕ್ಷಕ್ಕಾಗಿ ದುಡಿದು ಸಾಕಾಗಿದೆ. ನನ್ನ ನಂತರ ಬಂದವರೆಲ್ಲ ಕೋಟಿಗಟ್ಟಲೆ ದುಡ್ಡು ಮಾಡಿದ್ದಾರೆ. ಬಂಗಲೆ ಕಟ್ಟಿ, ಗೂಟದ ಕಾರಿನಲ್ಲಿ ಓಡಾಡುತ್ತಿದ್ದಾರೆ. ನಾನು ನಿಯತ್ತಾಗಿ ಹೀಗೆ ಉಳಿದುಕೊಂಡಿದ್ದೇನೆ. ಇದನ್ನು ನಾಯಕರಿಗೆ ಹೇಳಿದರೆ ನಮ್ಮನ್ನು ಈಚೆಗೆ ತಳ್ಳುತ್ತಾರೆ. ಈ ಪಕ್ಷದಲ್ಲಿ ಸಣ್ಣಪುಟ್ಟ ಕಾರ್ಯಕರ್ತರು ಯಾರೂ ಬದುಕಲು ಸಾಧ್ಯವಿಲ್ಲ. ದುಡ್ಡಿದ್ದವರಿಗೆ ಅವಕಾಶ ಇಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.