×
Ad

ಪೊಲೀಸರ ನಿವೇಶನ ಹಂಚಿಕೆಯಲ್ಲಿ ವಂಚನೆ ಶಂಕೆ: ಡಿಜಿಪಿಗೆ ಪತ್ರ ಬರೆದ ಸಂಘದ ಸದಸ್ಯರು

Update: 2021-07-04 00:01 IST

ಬೆಂಗಳೂರು, ಜು.3: ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘದ ನಿವೇಶನ ಹಂಚಿಕೆಯಲ್ಲಿ ವಿಳಂಬ, ಜತೆಗೆ ವಂಚನೆ ನಡೆದಿರುವ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಂಘದ ಸದಸ್ಯರು ಪತ್ರ ಬರೆದಿದ್ದಾರೆ.

2014ರಲ್ಲಿ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪಿಸಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಸದಸ್ಯರಿಗೆ ಜೇಷ್ಠತೆ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು.

ತದನಂತರ, 1,500 ರೂ. ಪಾವತಿ ಮಾಡಿ, ಸದಸ್ಯತ್ವ ಶುಲ್ಕ ನೀಡಲಾಗಿತ್ತು. ನೆಲಮಂಗಲದ ಮಲ್ಲರ ಬಾಣವಾಡಿ ಗ್ರಾಮದಲ್ಲಿ ಜಮೀನು ಖರೀದಿಸಲಾಗಿತ್ತು. ಚದರಡಿಗೆ 666 ರೂ. ಪಾವತಿ ಮಾಡಿದರೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ಬೆಳವಣಿಗೆ ಬಳಿಕ 2016ರಲ್ಲಿ ಪೂರ್ಣ ಹಣ ಪಾವತಿ ಮಾಡಿದರೆ, ಮೊದಲು ಜೇಷ್ಠತೆ ಆಧಾರದ ನಿವೃತ್ತಿ ಅಂಚಿಗೆ ಬಂದಿದ್ದವರಿಗೆ ಮೊದಲು ನಿವೇಶನ ಕೊಡುವುದಾಗಿ ಹೇಳಿದಾಗ ಸಾವಿರಾರು ಪೊಲೀಸರು ಹಣ ಹೂಡಿಕೆ ಮಾಡಿದ್ದರು. 2019-20ರ ವಾರ್ಷಿಕ ಸಭೆಯಲ್ಲಿ ಕೇವಲ 200 ಸದಸ್ಯರಿಗೆ ತಾತ್ಕಾಲಿಕ ಹಂಚಿಕೆ ಪತ್ರ ನೀಡಿದ್ದರು.

ಬಳಿಕ ಇಲ್ಲಿಯವರೆಗೂ ಸೈಟ್ ಹಂಚಿಕೆಯಾಗಿಲ್ಲ. ಒಂದಲ್ಲ ಒಂದು ಕಾರಣ ಹೇಳಿ ಮುಂದೂಡುತ್ತಿದ್ದಾರೆ. 2020-21ನೆ ಸಾಲಿನ ವಾರ್ಷಿಕ ಸಭೆಯಲ್ಲಿ 1 ಸಾವಿರ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಸಂಘದ ಅಧ್ಯಕ್ಷರೂ ಆಗಿರುವ ಐಪಿಎಸ್ ಅಧಿಕಾರಿ ಎ.ಎನ್. ಪ್ರಕಾಶ್ ಗೌಡ ಹೇಳಿದ್ದರು ಎಂದು ಆರೋಪಿಸಿದ್ದಾರೆ.

ಅಲ್ಲದೆ, ಈವರೆಗೂ ನೋಂದಣಿ ಮಾಡಿಕೊಟ್ಟಿಲ್ಲ. ಈ ಬಗ್ಗೆ ಕೇಳಲು ಹೋದರೆ ಕಾಯಲು ಆಗದಿದ್ದಲ್ಲಿ ನೀವು ಕಟ್ಟಿರುವ ಹಣವನ್ನು ವಾಪಸ್ಸು ಪಡೆದುಕೊಂಡು ಹೋಗಿ ಎಂದು ಬೇಜವಾಬ್ದಾರಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ನೊಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ರದಲ್ಲಿ ಆರೋಪಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಲಾಭ ಮಾಡುವ ಆಸೆಯಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿದ್ದಾರೆ. ಈ ಸಂಬಂಧ ಡಿಜಿಪಿ ಕೂಡಲೇ ಮಧ್ಯಪ್ರವೇಶಿಸಿ ವಂಚನೆಗೊಳಗಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನ್ಯಾಯ ಒದಗಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News