ತುಮಕೂರು: ದೇವಾಲಯದ ಬಳಿ ಮಹಿಳೆಯ ಮೃತದೇಹ ಪತ್ತೆ, ನಿಧಿಯಾಸೆಗೆ ಕೊಲೆ ಎಸಗಿರುವ ಶಂಕೆ
ತುಮಕೂರು, ಜು.4: ತಾಲೂಕಿನ ಜಕ್ಕೇನಹಳ್ಳಿ ಬಳಿಯ ಎಂ. ಗೊಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದ ಮೇಲಿನ ಆಂಜನೇಯ ದೇವಾಲಯದ ಬಳಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ನಿಧಿ ಶೋಧಕ್ಕಾಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಈ ದೇವಾಲಯದ ಬಳಿ ಕುರಿಗಾಹಿಗಳು ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಮೃತದೇಹ ಗುರುತು ಪತ್ತೆ ಸಾಧ್ಯವಾಗದಷ್ಟು ಕೊಳೆತಿದ್ದು, 15 ದಿನಗಳ ಹಿಂದೆ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಆಂಜನೇಯ ದೇವಾಲಯದ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದರೆ, ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ಅಗೆಯಲಾಗಿದ್ದು, ಪೂಜೆ ಸಲ್ಲಿಸಿರುವ ಕುರುಹುಗಳು ಕಂಡುಬಂದಿದೆ.
ಎಂ. ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಈ ಆಂಜನೇಯ ದೇವಾಲಯದ ಬಳಿ ಆಗಿಂದಾಗ್ಗೆ ನಿಧಿ ಸಿಗುತ್ತದೆ ಎಂದು ಕಿಡಿಗೇಡಿಗಳು ಅಗೆದು ದೇವಾಲಯ ಆವರಣವನ್ನು ಹಾಳು ಮಾಡುತ್ತಿದ್ದರೆನ್ನಲಾಗಿದೆ. ದೇವಾಲಯವು ಬೆಟ್ಟದ ಮೇಲಿರುವ ಕಾರಣ ಗ್ರಾಮಸ್ಥರು ದಿನನಿತ್ಯ ಆ ಕಡೆ ಸುಳಿಯುತ್ತಿರಲಿಲ್ಲ. ಹುಣ್ಣಿಮೆ, ಅಮಾವಾಸ್ಯೆಗಳಂದು ಈ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತೆಂದು ಹೇಳಲಾಗಿದೆ.
ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.