ರಾಜ್ಯ ಕಾಂಗ್ರೆಸ್ ನಲ್ಲಿ ಪಂಚ ಕೌರವರು ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ: ಸಚಿವ ಈಶ್ವರಪ್ಪ ವ್ಯಂಗ್ಯ
ಶಿವಮೊಗ್ಗ, ಜು.4: ಮಹಾಭಾರತ ಎಂದ ಕೂಡಲೇ, ಪಂಚ ಪಾಂಡವರು ನೆನಪಿಗೆ ಬರುತ್ತಾರೆ. ಆದರೆ ರಾಜ್ಯ ಕಾಂಗ್ರೆಸ್ ನಲ್ಲಿ ಪಂಚ ಕೌರವರು ಅಧಿಕಾರ ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಐದು ಜಾತಿಗೆ ಒಬ್ಬೊಬ್ಬರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ತನ್ವಿರ್ ಸೇಠ್ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದ ಅವರು, ಸಮಾಜವಾದವನ್ನ, ಸಾಮಾಜಿಕ ನ್ಯಾಯ ನೀಡುವುದಾಗಿ ಕೇವಲ ಬಾಯಿ ಮಾತಲ್ಲಿ ಹೇಳಿ ಸಿದ್ದರಾಮಯ್ಯ ಸಿಎಂ ರೇಸ್ ನಲ್ಲಿದ್ದಾರೆ ಎಂದು ಕುಟುಕಿದರು.
ವ್ಯಕ್ತಿ ಪೂಜೆ ಮಾಡಬಾರದೆಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ಕಡೆ ಹೇಳ್ತಾರೆ. ಇನ್ನೊಂದೆಡೆ ಚಾಮರಾಜ ನಗರದಲ್ಲಿ ಕಾರ್ಯಕರ್ತರ ಮೂಲಕ ನಾನೇ ಸಿಎಂ ಎಂದು ಹೇಳಿಸುತ್ತಾರೆ. ದಲಿತ ಮುಖ್ಯಮಂತ್ರಿ ಎಂದು ಹೇಳಿ ಪರಮೇಶ್ವರ್ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಇತ್ತ ಅಲ್ಪ ಸಂಖ್ಯಾತರಿಂದ ತನ್ವೀರ್ ಸೇಠ್ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ, ಜನರಿಂದ ತಿರಸ್ಕಾರಗೊಂಡ ಬಳಿಕ ಸುಮ್ಮನಿರಬೇಕಿತ್ತು ಎಂದು ಟೀಕಿಸಿದ್ದಾರೆ.
ಧರ್ಮವನ್ನು ಹಾಳು ಮಾಡುವ ಕಾಂಗ್ರೆಸ್ ಪಕ್ಷವನ್ನು ಜನರೇ ತಿರಸ್ಕಾರ ಮಾಡಿ ಹೊರಗಟ್ಟಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ, ತಾವು ಮುಖ್ಯಮಂತ್ರಿ ಎಂದು ಇವರೇ ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.