ಕೊಡಗು ಲಾಕ್‍ಡೌನ್ ಸಡಿಲಿಕೆ : ಸೋಮವಾರದಿಂದ ಶುಕ್ರವಾರದ ವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ಅನ್‍ಲಾಕ್

Update: 2021-07-04 13:22 GMT
ಜಿಲ್ಲಾಧಿಕಾರಿ ಚಾರುಲತಾ ಸೋಮಲ್

ಮಡಿಕೇರಿ ಜು.4 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಲಾಕ್‍ಡೌನ್ ಕೊಂಚ ಸಡಿಲಿಕೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳೊಂದಿಗೆ ಜು.19 ರವರೆಗೆ ಅನ್‍ಲಾಕ್ ಜಾರಿಯಲ್ಲಿರುತ್ತದೆ.

ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ವಿಚಾರಣೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರತಕ್ಕದ್ದು.

ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ನೆರೆಯ ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಅವಧಿಯೊಳಗಿನ ಕೋವಿಡ್ ನೆಗೆಟಿವ್ ವರದಿ (ಆರ್.ಟಿ.ಪಿ.ಸಿ.ಆರ್ ವರದಿ) ಹೊಂದಿರತಕ್ಕದ್ದು.

ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಗಳು ಸಕಾರಣವಿಲ್ಲದೆ ಅನಗತ್ಯ ಸಂಚರಿಸುವುದು / ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಕೊಡಗು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ್ಲಿ ಮೃತರ ಅಂತ್ಯಕ್ರಿಯೆ ಸಂಬಂಧಿತ  ಕಾರ್ಯಗಳಿಗೆ ಸರ್ಕಾರದ ಮಾರ್ಗಸೂಚಿಸಿಯನ್ನು ಗಮನದಲ್ಲಿರಿಸಿಕೊಂಡು, ಸಂಬಂಧಪಟ್ಟ ದೇವಾಲಯ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಂಡು ಗರಿಷ್ಟ 5 ಮಂದಿ ಮೀರದಂತೆ ನಡೆಸಲು ಅನುಮತಿಸಿದೆ.

 ಸದ್ಯ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆ ಪ್ರವಾಸೋದ್ಯಮ ಚಟುವಟಿಕೆಗೆ ನಿರ್ಬಂಧವಿದ್ದು, ಹೋಂ ಸ್ಟೇ, ಹೊಟೇಲ್, ಲಾಡ್ಜ್, ರೆಸಾರ್ಟ್ ಗಳಲ್ಲಿ ಆತಿಥ್ಯ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಪ್ರತಿ ದಿನ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಮತ್ತು ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತರ್ತು ಅತ್ಯವಶ್ಯಕ, ವೈದ್ಯಕೀಯ, ಸರಕು ಸಾಗಾಣಿಕೆ ಮತ್ತು ತುರ್ತು ಸೇವೆಗಳ ಹೊರತಾಗಿ ಇತರೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News