ಎಸೆಸೆಲ್ಸಿ ಪರೀಕ್ಷೆ ನಡೆಸುವ ಮೂಲಕ ದಲಿತ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ: ಎಚ್. ವಿಶ್ವನಾಥ್

Update: 2021-07-04 13:38 GMT

ಮೈಸೂರು,ಜು.4: ಎಸೆಸೆಲ್ಸಿ ಪರೀಕ್ಷೆ ನಡೆಸುವ ಮೂಲಕ ದಲಿತರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರ ಮಕ್ಕಳನ್ನು ಶಿಕ್ಷಣದಿಂದ ವಂಚಿಸಲಾಗುವ ಹುನ್ನಾರ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸೌಲಭ್ಯ ಇರುವ ಮಕ್ಕಳಿಗೆ ಈ ಪರೀಕ್ಷೆ ಉತ್ತಮವೆನಿಸುತ್ತದೆ. ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರ ಮಕ್ಕಳಿಗೆ ಕಷ್ಟವಾಗುತ್ತದೆ. ಎಲ್ಲ ಮಕ್ಕಳಿಗೆ ಲ್ಯಾಪ್‍ಟ್ಯಾಪ್ ಕೊಟ್ಟಿಲ್ಲ. ತರಬೇತಿ ನೀಡಿಲ್ಲ. ಶಾಲೆಗೆ ಹೋಗಿಲ್ಲ. ಆದರೂ ಒಂದೇ ದಿನ ಮೂರು ಪತ್ರಿಕೆಗಳಿಗೆ ಮಕ್ಕಳು ಉತ್ತರ ಬರೆಯಬೇಕು. ಇದು ದಲಿತರನ್ನು ಶಿಕ್ಷಣದಿಂದ ವಂಚಿರನ್ನಾಗಿ ಮಾಡುವ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಜ್ಞಾನ ಸಂಜೀವಿನಿ, ಜ್ಞಾನಮೂರ್ತಿ ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅವರಿಗೆ ಬಡ ವಿದ್ಯಾರ್ಥಿಗಳ ಸಮಸ್ಯೆ ಅರ್ಥವಾಗುವುದಿಲ್ಲವೇ? ಶಕ್ತಿ ಪೀಠ ಮಸುಕಾದ ಹಿನ್ನೆಲೆಯಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಸುರೇಶ್ ಕುಮಾರ್ ಅವರ ಹಠ ಒಳ್ಳೆಯದಲ್ಲ. ಅನಾಹುತ ಸಂಭವಿಸಿದರೆ ಜವಾಬ್ದಾರಿ ಹೊರುವವರು ಯಾರು? ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಬಾರದೆಂದು ಆಗ್ರಹಿಸಿದರು.

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಸೆಸೆಲ್ಸಿ ಪರೀಕ್ಷೆ ರದ್ದು ಮಾಡಬೇಕು ಎಂದ ಅವರು, ಮಗುವಿನ ಆರೋಗ್ಯ, ಸುರಕ್ಷತೆಗೆ ಆದ್ಯತೆ ಕೊಡಬೇಕು. ಅನಂತರ ಶಿಕ್ಷಣ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕ್ರಮವು ಅನರ್ಥ ಮತ್ತು ಅನಾಹುತ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿದೆ.  ಶಾಲೆ ನಡೆದಿಲ್ಲ. ಮಕ್ಕಳು ಪಾಠ ಕೇಳಿಲ್ಲ. ಆದರೂ ಪರೀಕ್ಷೆ ನಡೆಸಲಾಗುತ್ತಿದೆ. ಶಿಕ್ಷಣ ಸಚಿವರ ಇಷ್ಟೊಂದು ಹಠ ಯಾಕೆ ಎಂದು ಪ್ರಶ್ನಿಸಿದರು.

ಬೇರೆ ಬೇರೆ ರಾಜ್ಯಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ರದ್ದು ಮಾಡಲಾಗಿದೆ. ಯಾಕೆಂದರೆ ಈ ಮಕ್ಕಳಿಗೆ ಇನ್ನೂ ಲಸಿಕೆ ಕೊಟ್ಟಿಲ್ಲ. ಲಸಿಕೆ ಜೀವ ರಕ್ಷಕ. ಪರೀಕ್ಷೆ ನಡೆಸಿದರೆ 8.5 ಲಕ್ಷ ಮಕ್ಕಳ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಬಹುದು. ಕೋವಿಡ್ ಹರಡಲು 2ರಿಂದ 3 ದಿನ ಬೇಕಂತೆ. ಡೆಲ್ಟಾ ಹರಡಲು 2ರಿಂದ 3 ನಿಮಿಷ ಸಾಕೆಂದು ತಜ್ಞರು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪರೀಕ್ಷೆ ಬೇಕೆ? ಎಂದು ಕೇಳಿದರು.

ವಿಮಾನದಲ್ಲಿ ದೆಹಲಿಗೆ ಹೋಗಲು ಕೊರೋನ ನೆಗೆಟಿವ್ ಪತ್ರ ತೋರಿಸಬೇಕು. ಮಕ್ಕಳು ಯಾವ ಪತ್ರ ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಬರುತ್ತಾರೆ. ಒಂದು ಪರೀಕ್ಷೆಯಿಂದ ಮಕ್ಕಳು, ಶಿಕ್ಷಕರು, ಪೋಷಕರು ಸೇರಿ ಸುಮಾರು 32 ಲಕ್ಷ ಜನರ ಆರೋಗ್ಯದ ಜತೆ ಚೆಲ್ಲಾಟವಾಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News