ಪಿಎಸ್‍ಎಸ್ ಗುತ್ತಿಗೆ ಕರಾರು ಉಲ್ಲಂಘಿಸಿಲ್ಲ: ವಿಜಯ ನಿರಾಣಿ ಸ್ಪಷ್ಟನೆ
ಮಂಡ್ಯ, ಜು.4: ಸರಕಾರಕ್ಕೆ ಯಾವುದೇ ರೀತಿಯಲ್ಲೂ ವಂಚನೆಮಾಡದೆ, ಕಾನೂನಿನ ಪ್ರಕಾರವೇ ಕಾರ್ಮಿಕರಿಗೆ ಸಕಾಲಕ್ಕೆ ಸರಿಯಾಗಿ ತಿಂಗಳ ವೇತನ, ರೈತರಿಗೆ ಹಣ ಪಾವತಿ ಹಾಗೂ ಶಾಸನಬದ್ಧವಾಗಿ ಶುಲ್ಕವನ್ನು ಭರಿಸಿದ್ದೇವೆ ಎಂದು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ(ಪಿಎಸ್‍ಎಸ್‍ಕೆ)ಯನ್ನು 40 ವರ್ಷ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‍ನ ವ್ಯವಸ್ಥಾಪಕ ನಿದೇರ್ಶಕ ವಿಜಯ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಅವರು, ಕರಾರಿನ ಪ್ರಕಾರ ಹಣ ಕಟ್ಟದೆ ಸರಕಾರಕ್ಕೆ ವಂಚನೆ ಮಾಡಿದ್ದಾರೆಂದು ತನ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿರುವ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಜಯ ನಿರಾಣಿ, ಕಾನೂನು ಬದ್ಧವಾಗಿಯೇ ವ್ಯವಹಾರ ನಡೆಸುತ್ತಿದ್ದು ಎಲ್ಲಿಯೂ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಹೆಚ್ಚು ಬೆಲೆಗೆ ಬಿಡ್ ಮಾಡಿ ಸರಕಾರದ ಕರಾರಿನಂತೆ ಕಾರ್ಖಾನೆ ಲೀಜ್ ಪಡೆಯಲಾಗಿದೆ. 1 ಕೋಟಿ ರೂ. ಇ.ಎಂ.ಡಿ ಹಾಗೂ 5 ಕೋಟಿ ರೂ. ಭದ್ರತಾ ಠೇವಣಿಯನ್ನು ಈಗಾಗಲೇ ಸಂದಾಯ ಮಾಡಲಾಗಿದೆ. ಮೊದಲ ಕಂತಿನ 20 ಕೋಟಿ ಹಣ ಕಟ್ಟಲು ಸಿದ್ದರಿದ್ದೇವೆ. ಆದರೆ. ಕರಾರಿನ ಪ್ರಕಾರ ಗುತ್ತಿಗೆ ಪಡೆಯುವ ಮೊದಲು ಕಾರ್ಖಾನೆಯ ಮೇಲೆ ವಿವಿಧ ಹಣಕಾಸು ಸಂಸ್ಥೆಗಳ ಋಣಭಾರವನ್ನು ಸರಕಾರ ತೆರವುಗೊಳಿಸಿಲ್ಲವಾದ್ದರಿಂದ ಹಣ ಕಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕರ ವೇತನ, ರೈತರ ಬಿಲ್ ಪಾವತಿ, ಗುತ್ತಿಗೆದಾರರು, ಕಬ್ಬುಕಟಾವುದಾರರು, ವಾಹನ ಬಾಡಿಗೆದಾರರ ಹಣ ಎಲ್ಲವನ್ನು ಸಕಾಲಕ್ಕೆ ನಿಯಮಿತವಾಗಿ ನೀಡುತ್ತಾ ಬಂದಿದ್ದೇವೆ. 21 ಜನ ಉದ್ಯೋಗಿಗಳನ್ನು ಕೆಲಸದಿಂದ ನಾವು ಬಿಡುಗಡೆಗೊಳಿಸಿಲ್ಲ. ಅದು ಪಿಎಸ್‍ಎಸ್‍ಕೆ ಆಡಳಿತ ಮಂಡಳಿ ನಿರ್ಧಾರ. ಅದಕ್ಕೂ ನಮಗೂ ಸಂಬಂಧವಿಲ್ಲ. ಕಾರ್ಖಾನೆಯಎಲ್ಲ ಹಳೆಯ ಉದ್ಯೋಗಿಗಳನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ನಷ್ಟಕ್ಕೆ ಸಿಲುಕಿದ್ದ ಕಾರ್ಖಾನೆಯನ್ನು ಕೋವಿಡ್ ಸಂಕಷ್ಟದ ನಡುವೆಯೂ ಅತಿ ಕಡಿಮೆ ಅವಧಿಯಲ್ಲಿ ಮರುಪ್ರಾರಂಭಿಸಿದ್ದೇವೆ. ಸುಖಾಸುಮ್ಮನೆ ತಮ್ಮ ಹಾಗೂ ನಿರಾಣಿ ಶುಗರ್ಸ್ ಮೇಲೆ ಸುಳ್ಳು ಆರೋಪ ಮಾಡಿರುವ ಡಾ.ರವೀಂದ್ರ ಅವರು ಕೂಡಲೇ ಕ್ಷೆಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.