×
Ad

`ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬೇಡಿ': ಸಿಎಂ ಬಿಎಸ್‍ವೈಗೆ ತಮಿಳುನಾಡು ಮುಖ್ಯಮಂತ್ರಿ ಪತ್ರ

Update: 2021-07-04 19:44 IST

ಬೆಂಗಳೂರು, ಜು. 4: `ಮೇಕೆದಾಟು ಯೋಜನೆ'ಯನ್ನು ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬೇಡಿ. ಕಾವೇರಿ ನದಿ ಪಾತ್ರದಲ್ಲಿ ತಮಿಳುನಾಡು ಸರಕಾರ ಕೈಗೆತ್ತಿಕೊಳ್ಳುತ್ತಿರುವ ಎರಡು ಜಲವಿದ್ಯುತ್ ಯೋಜನೆಗಳಿಗೂ, ಕರ್ನಾಟಕದ ಮೇಕೆದಾಟು ಯೋಜನೆಗೂ ಹೋಲಿಕೆ ಮಾಡಬೇಡಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪತ್ರ ಬರೆದಿದ್ದಾರೆ.

ನಿನ್ನೆಯೆಷ್ಟೇ ಸಿಎಂ ಯಡಿಯೂರಪ್ಪ ಬರೆದಿದ್ದ ಪತ್ರಕ್ಕೆ ಉತ್ತರವಾಗಿ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದು, `ತಮಿಳುನಾಡಿನಲ್ಲಿ ವಿದ್ಯುತ್ ಅಭಾವ ಇರುವ ಕಾರಣ, ನಮ್ಮ ಪಾಲಿಗೆ ಬಂದಿರುವ ಕಾವೇರಿ ನೀರಿನಲ್ಲೇ ಎರಡು ಜಲವಿದ್ಯುತ್ ಘಟಕಗಳನ್ನು ನಿರ್ಮಿಸುತ್ತಿದ್ದೇವೆ. ಜಲವಿದ್ಯುತ್ ಯೋಜನೆಗೆ ಬಳಕೆಯಾಗುವ ಇದೇ ನೀರು ಮುಂದೆ ಕೃಷಿ ಹಾಗೂ ಕುಡಿಯುವ ನೀರಿಗೆ ಮರುಬಳಕೆಯಾಗುತ್ತದೆ' ಎಂದು ತಿಳಿಸಿದ್ದಾರೆ.

`ಆದರೆ, ಕರ್ನಾಟಕ ಸರಕಾರ `ಮೇಕೆದಾಟು ಯೋಜನೆ'ಯಡಿ 67.16 ಟಿಎಂಸಿ ನೀರಿನ ಸಂಗ್ರಹ ಪ್ರಸ್ತಾಪ ಮಾಡಿರುವುದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಈ ಯೋಜನೆ ಜಾರಿಯಾದರೆ, ಅಂತರ್ ರಾಜ್ಯ ನೀರಾವರಿ ಹಂಚಿಕೆಯ ನಿಯಮಾವಳಿಗಳ ಉಲ್ಲಂಘನೆಯಾಗುತ್ತೆ. ಕಾವೇರಿ ನದಿ ನೀರು ಕೆಆರ್ಎಸ್ ದಾಟಿದ ನಂತರ ಅನಿಯಂತ್ರಿತವಾಗಿ ತಮಿಳುನಾಡಿನತ್ತ ಸಾಗುತ್ತದೆ. ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ ಸೇರಿದಂತೆ ಹಲವು ಜಲಮೂಲಗಳು ಇದಕ್ಕೆ ಸೇರ್ಪಡೆಯಾಗುತ್ತದೆ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಯಾದರೆ, ಅನಿಯಂತ್ರಿತ ನೀರಿನ ಹರಿವಿಗೆ ತಡೆ ಒಡ್ಡಿದಂತಾಗುತ್ತದೆ. ಅಲ್ಲದೆ ಇದು ತಮಿಳುನಾಡಿನ ರೈತ ಸಮೂಹದ ಹಿತಾಸಕ್ತಿಯ ವಿರುದ್ಧವಾಗಿದೆ' ಎಂದು ಸ್ಟಾಲಿನ್ ಉಲ್ಲೇಖಿಸಿದ್ದಾರೆ.

`ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಇದೇ ಕಾರಣಕ್ಕಾಗಿ ಮೇಕೆದಾಟು ಯೋಜನೆಗೆ ಸಿದ್ಧತೆ ರೂಪಿಸಲಾಗಿದೆ. ಆದರೆ, ಅಣೆಕಟ್ಟೆ ನಿರ್ಮಾಣವಾಗುತ್ತಿರುವ ಪ್ರದೇಶ ಬೆಂಗಳೂರು ಮಹಾನಗರದಿಂದ ತುಂಬಾ ದೂರವಿದೆ. ಹೀಗಾಗಿ, ನೀವು ಕೊಡುತ್ತಿರುವ ಕಾರಣ ಒಪ್ಪಲು ಸಾಧ್ಯವಿಲ್ಲ' ಎಂದು ಸ್ಟಾಲಿನ್, ಮೇಕೆದಾಟು ಯೋಜನೆ ಪ್ರಸ್ತಾಪಕ್ಕೆ ಆಕ್ಷೇಪಿಸಿದ್ದಾರೆ.

`ಕರ್ನಾಟಕವು ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಾವೇರಿ ನದಿ ನೀರನ್ನು ಬಳಸಿಕೊಳ್ಳಲುತ್ತಿದೆ. ಜೊತೆಗೆ ಹೆಚ್ಚುವರಿಯಾಗಿ 4.75 ಟಿಎಂಸಿ ಕುಡಿಯುವ ನೀರಿನ ಅಗತ್ಯತೆಗಾಗಿ 67.16 ಟಿಎಂಸಿ ಸಂಗ್ರಹ ಸಾಮಥ್ರ್ಯದ ಅಣೆಕಟ್ಟನ್ನು ಮೇಕೆದಾಟಿನಲ್ಲಿ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ತಮಿಳುನಾಡಿಗೆ ನೀರಿನ ಕೊರತೆ ಉಂಟಾಗಲಿದೆ. ಕಾವೇರಿ ನದಿ ನೀರಿನ ಹಂಚಿಕೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಮಾಡಿದೆ. ಆದರೆ, ನಾವು ನಮ್ಮ ಪಾಲಿನ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಸುದೀರ್ಘ ಕಾಲ ಜಲ ವಿವಾದ ನಡೆದು ಬಂತು. ಇದೀಗ ನಮ್ಮ ಪಾಲಿನ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದರೆ, ನೀರಾವರಿ ವ್ಯವಸ್ಥೆ ಬಲಪಡಿಸಬೇಕು' ಎಂದು ಸ್ಟಾಲಿನ್ ತಿಳಿಸಿದ್ದಾರೆ.

`ಕೆಲವು ಹಳೆಯ ಕಾಲುವೆ, ಸಂಗ್ರಹಾಗಾರಗಳ ಆಧುನೀಕರಣವಾಗಬೇಕು. ಇವೆಲ್ಲವೂ ಆಗದೆ ನಾವು ಕಾವೇರಿ ನೀರಿನ ಸಮರ್ಥ ಬಳಕೆ ಮಾಡಿಕೊಳ್ಳಲು ಅಸಾಧ್ಯ. ಆದುದರಿಂದ ಈ ಎಲ್ಲ ಕಾರಣ ವಿಷಯದ ಗಂಭೀರತೆ, ಸೂಕ್ಷ್ಮತೆ ಅರಿತುಕೊಂಡು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು. ಆದರೆ, ಉಭಯ ರಾಜ್ಯಗಳ ನಡುವೆ ಸಹಭಾಳ್ವೆ-ಸಹಕಾರ ಮುಂದುವರಿಯಲಿ' ಎಂದು ಸ್ಟಾಲಿನ್ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News