×
Ad

ಮೇಕೆದಾಟು ಯೋಜನೆಗೆ ರಾಜಕೀಯ ಕಾರಣಕ್ಕೆ ತಮಿಳುನಾಡು ಅಡ್ಡಿ: ಸಚಿವ ಬಸವರಾಜ ಬೊಮ್ಮಾಯಿ

Update: 2021-07-04 21:02 IST

ಬೆಂಗಳೂರು, ಜು. 4: ರಾಜಕೀಯಕ್ಕಾಗಿ ಮೇಕೆದಾಟು ಮತ್ತು ಮಾರ್ಕಂಡೇಯ ಅಣೆಕಟ್ಟು ವಿಚಾರವಾಗಿ ತಮಿಳುನಾಡು ಸರಕಾರ ಅಡ್ಡಿಪಡಿಸುತ್ತಿದ್ದು, ಕಾನೂನು ಹೋರಾಟದಲ್ಲಿ ನಮಗೆ ಜಯ ದೊರೆಯುವ ವಿಶ್ವಾಸವಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಹಿಂದಿನಿಂದಲೂ ಕಾವೇರಿ ನದಿಯ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆಯುತ್ತಿದೆ. ಈಗಾಗಲೇ ನ್ಯಾಯಾಧಿಕರಣ ತೀರ್ಮಾನ ಆಗಿದೆ. ಇದೀಗ ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿನ ಯೋಜನೆ ತಮಿಳುನಾಡು ಆಕ್ಷೇಪಿಸುವುದು ಸರಿಯಲ್ಲ ಎಂದರು.

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಉಭಯ ರಾಜ್ಯಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ನೀರಿನ ಕೊರತೆ ಉಂಟಾದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಕೊಡಲು ಈ ಅಣೆಕಟ್ಟು ನೆರವಾಗಲಿದೆ. ಈಗಾಗಲೇ ತೀರ್ಪಿನಂತೆ ಅವರ ಪಾಲಿನ ನೀರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೂ ಅವರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.|

ತನ್ನ ರಾಜಕೀಯ ಕಾರಣಕ್ಕಾಗಿ ಅಲ್ಲಿನ ಸರಕಾರ ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿದೆ. ಕಾನೂನಾತ್ಮವಾಗಿ ನಾವು ಸರಿಯಾಗಿದ್ದು, ಈಗಾಗಲೇ ನಮ್ಮ ರಾಜ್ಯದ ಪರ ವಕೀಲರು ಸುಪ್ರೀಂ ಕೋರ್ಟ್‍ನಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದ ಅವರು, ನಿನ್ನೆಯೆಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ, ಅಲ್ಲಿನ ಸಿಎಂಗೆ ಪತ್ರ ಬರೆದಿದ್ದು, ಅವರು ಇದಕ್ಕೆ ಸ್ಪಂದಿಸಬೇಕು. ಇದರಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದರು.

ಆಮದು ಶಕ್ತಿಯ ಅಗತ್ಯವಿದೆ: ಪ್ರತಿಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ಈಗಿರುವ ಶಕ್ತಿ ಸಾಕಾಗುತ್ತಿಲ್ಲ. ಹೀಗಾಗಿ ಅವರಿಗೆ ಆಮದು ಶಕ್ತಿಯ ಅಗತ್ಯವಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆತಂಕ ಶುರುವಾಗಿದೆ. ಆದುದರಿಂದಲೇ ಅವರು ಪಕ್ಷ ತ್ಯಜಿಸಿದ 17 ಮಂದಿ ಸೇರಿದಂತೆ ಪಕ್ಷಕ್ಕೆ ಸೇರಬಯಸುವ ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿಕೆ ನೀಡಿದ್ದಾರೆಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News