ಜು.5 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ

Update: 2021-07-04 16:36 GMT

ಬೆಂಗಳೂರು, ಜು. 4: ಕೋವಿಡ್ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಹೇರಿದ್ದ ಸುದೀರ್ಘ ಅವಧಿಯ `ಕೊರೋನ ಕಫ್ರ್ಯೂ, ಲಾಕ್ ಡೌನ್ ನಿರ್ಬಂಧ'ವನ್ನು ನಾಳೆ(ಜು.5)ಯಿಂದ ಸಂಪೂರ್ಣ ಸಡಿಲಿಸಿದ್ದು, ಶಾಲಾ-ಕಾಲೇಜು, ಚಿತ್ರಮಂದಿರಗಳನ್ನು ಹೊರತುಪಡಿಸಿ ಮಾಲ್ ಗಳು, ದೇವಸ್ಥಾನ, ಮಸೀದಿ ಸಹಿತ ಎಲ್ಲ ಅಂಗಡಿ-ಮುಂಗಟ್ಟುಗಳ ವಾಣಿಜ್ಯ ಚಟುವಟಿಕೆಗಳು ಆರಂಭವಾಗಲಿವೆ.

ಸರಿಸುಮಾರು ಎರಡೂ ತಿಂಗಳ ಕಾಲ ಕಠಿಣ ಕರ್ಫ್ಯು, ಲಾಕ್ಡೌನ್ ನಿರ್ಬಂಧಗಳಿಂದ ಅಕ್ಷರಶಃ ಗೃಹ ಬಂಧನದ ಸ್ಥಿತಿ ಅನುಭವಿಸಿದ್ದ ಜನರು, ಬಂಧನದಿಂದ ಬಿಡುಗಡೆಯ ಸಂತೋಷದಲ್ಲಿದ್ದಾರೆ. ಬಹುದಿನಗಳಿಂದ ಉದ್ಯೋಗ ಮತ್ತು ಆದಾಯವಿಲ್ಲದೆ ಕಂಗೆಟ್ಟಿದ್ದ ಕೂಲಿ ಕಾರ್ಮಿಕರು ಸೇರಿ ದುಡಿಯುವ ಜನ ಅನ್ಲಾಕ್-3 ಜಾರಿ ಹಿನ್ನೆಲೆಯಲ್ಲಿ `ಕೋವಿಡ್ ಕಾರ್ಮೋಡದ ಮಧ್ಯೆ ಹೊಸಜೀವನ'ದ ನಿರೀಕ್ಷೆಯಲ್ಲಿದ್ದಾರೆ.

ಕೈಗಾರಿಕೆಗಳು ಸಹಿತ ಎಲ್ಲ ಅಂಗಡಿ-ಮುಂಗಟ್ಟುಗಳು ರಾತ್ರಿ 9ರ ವರೆಗೂ ತೆರೆದು ವಹಿವಾಟು ನಡೆಸಲು ಅನುಮತಿಸಿದ್ದು, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ ಸಹಿತ ಸಾರ್ವಜನಿಕ ಸಂಚಾರವೂ ನಾಳೆಯಿಂದ ಸಂಪೂರ್ಣ ಮುಕ್ತವಾಗಲಿದ್ದು, ಆಟೋರಿಕ್ಷಾ, ಟ್ಯಾಕ್ಸಿ ಸಂಚಾರವೂ ಇರಲಿದೆ. ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಕುಳಿತು ಊಟ-ಉಪಾಹಾರ ಸೇವಿಸಲು ಅವಕಾಶ ನೀಡಲಾಗಿದೆ. ಮಾಲ್ಗಳಲ್ಲಿ ಸುತ್ತಾಡಬೇಕೆಂಬ ಜನರ ಬಯಕೆಯು ನಾಳೆಯಿಂದ ಸಾಕಾರಗೊಳ್ಳಲಿದೆ.
ರಾತ್ರಿ ಕಫ್ರ್ಯೂನಿಂದ ಸಂಜೆಯ ಸವಿ ಕ್ಷಣಗಳನ್ನು ಕಳೆದುಕೊಂಡಿದ್ದ ರಾಜ್ಯದ ಜನತೆಗೆ ನಾಳೆಯಿಂದ ರಾತ್ರಿ 9ಗಂಟೆಯ ವರೆಗೆ ಸಂಜೆ ಖುಷಿಯನ್ನು ಸವಿಯಲು ಸಮಯ ಸಿಗಲಿದೆ. ಅಲ್ಲದೆ, ವಾರಾಂತ್ಯ ಕಫ್ರ್ಯೂವಿನ ಗೊಡವೆಯೂ ಇಲ್ಲ. ಹೀಗಾಗಿ ಮಾಮೂಲಿನಂತೆ ನಿತ್ಯದ ಬದುಕನ್ನು ರೂಢಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ, ಬಾರ್ಗಳಲ್ಲಿ ರಾತ್ರಿ 9ರ ವರೆಗೆ ಕೂತು ಮದ್ಯ ಸೇವಿಸಲು ಅವಕಾಶವಿದೆ.

ಈ ಮಧ್ಯೆ ನಾಳೆಯಿಂದ ಮಾಲ್ ಗಳ ಆರಂಭಕ್ಕೆ ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಮಾಲ್ಗಳ ಚಟುವಟಿಕೆ ಆರಂಭಕ್ಕೆ ಸ್ವಚ್ಛತೆ, ಸ್ಯಾನಿಟೈಜೆಷನ್ ಕಾರ್ಯ ಕಂಡುಬಂತು. ಅದೇ ರೀತಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ, ಮಸೀದಿಗಳಲ್ಲಿ ನಮಾಝ್ಗೆ ಅವಕಾಶ ನೀಡಿದ್ದು, ದೇವಳ ಮತ್ತು ಮಸೀದಿಗಳ ಸ್ವಚ್ಛತೆ ಕಾರ್ಯವೂ ಭರದಿಂದ ಸಾಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ನಿರ್ಬಂಧ: ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಅವಕಾಶ ಇಲ್ಲ. ಜತೆಗೆ ಧಾರ್ಮಿಕ, ರಾಜಕೀಯ ಸಮಾರಂಭಗಳಿಗೂ ನಿಬರ್ಂಧ ಮುಂದುವರೆದಿದೆ. ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಪ್ರತಿಭಟನೆ, ಸತ್ಯಾಗ್ರಹಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಇವುಗಳನ್ನು ಹೊರತುಪಡಿಸಿದರೆ ನಾಳೆಯಿಂದ ಎಲ್ಲವೂ ಮುಕ್ತಗೊಳ್ಳಲಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.

ಪ್ರೇಕ್ಷಣೀಯ ಸ್ಥಳಗಳು ಅನ್ಲಾಕ್: ಪ್ರೇಕ್ಷಣೀಯ ಸ್ಥಳಗಳು, ಮೃಘಾಲಯಗಳು ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳು ನಾಳೆಯಿಂದ ಅನ್ಲಾಕ್ ಆಗಲಿದ್ದು, ಪ್ರವಾಸಿಗರು ತಮ್ಮಿಷ್ಟದ ಸ್ಥಳಗಳು, ಪ್ರಾಣಿ, ಪಕ್ಷಗಳು ಹಾಗೂ ದೇವರಗಳನ್ನು ದರ್ಶನ ಮಾಡಿ ಕಣ್ತುಂಬಿಕೊಳ್ಳಲು ಅವಕಾಶವಾಗಲಿದೆ. ಹೀಗಾಗಿ ಎಲ್ಲೆಡೆ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆಗಳಿವೆ.
ಕೊಡಗು ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆ ಆರಂಭವಾಗಲಿದೆ. ಆದರೆ, ಕೋವಿಡ್ ಸೋಂಕಿನ ಜೊತೆಗೆ ಡೆಲ್ಟಾ ರೂಪಾಂತರಿಯ ಆತಂಕವೂ ಮನೆ ಮಾಡಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ವಚ್ಛತೆಗೆ ಆಸ್ಥೆ ವಹಿಸುವ ಮೂಲಕ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News