ಕೋವಿಡ್‍ನಿಂದ ಮೃತಪಟ್ಟ ರೈತರ ಒಂದು ಲಕ್ಷ ರೂ.ಸಾಲ ಮನ್ನಾಗೆ ಚಿಂತನೆ: ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್ ಗೌಡ

Update: 2021-07-04 16:48 GMT

ಮೈಸೂರು,ಜು.4: ಕೋವಿಡ್ ನಿಂದ ಮೃತಪಟ್ಟ ರೈತರ ಒಂದು ಲಕ್ಷ ರೂ. ಸಾಲಮನ್ನಾ ಮಾಡಲು ಚರ್ಚೆ ನಡೆಸಲಾಗಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಟಿ.ಹರೀಶ್‍ಗೌಡ ತಿಳಿಸಿದರು.

ನಗರದ ಎಂಸಿಡಿಸಿಸಿ ಬ್ಯಾಂಕ್ ಆವರಣದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿ ನಮ್ಮ ಬ್ಯಾಂಕ್ ವತಿಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಕೋವಿಡ್ ನಿಂದ ಮೃತ ಪಟ್ಟ ರೈತರ ಒಂದು ಲಕ್ಷ ಸಾಲ ಮನ್ನಾ ಮಾಡಲು ಚರ್ಚೆ ನಡೆಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಯಾವ ಸೂಚನೆ ಬರಲಿದೆ ಎಂಬುದನ್ನು ತಿಳಿದುಕೊಂಡು ನಂತರ ತೀರ್ಮಾನ ಮಾಡಲಾಗುವುದು ಎಂದರು.

ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ನಿಂದ 280 ರೈತರು ಮೃತಪಟ್ಟಿದ್ದಾರೆ. ಇವರ 2.14 ಕೋಟಿ ಸಾಲ ಮನ್ನಾ ಮಾಡಬೇಕಾಗುತ್ತದೆ. ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ನಮ್ಮ ಬ್ಯಾಂಕ್ ವತಿಯಿಂದ ಹಲವಾರು ಸಾಲ ಯೋಜನೆ ನೀಡಲಾಗಿದೆ. ಗೋಲ್ಡ್ ಲೋನ್ ಮೇಲೆ 11% ವಿಧಿಸಿದ್ದ ಬಡ್ಡಿ ದರವನ್ನು ಕೋವಿಡ್ ನಿಂದ 9 %ಗೆ ಇಳಿಸಲಾಗಿದೆ. ಈಗಾಗಲೇ ಬೆಳೆ ಸಾಲ ಸೇರಿದಂತೆ ಹಲವಾರು ಸಾಲಗಳನ್ನು ನೀಡಲಾಗಿದೆ. 6 ಎಕರೆ ಮೇಲ್ಪಟ್ಟು ಜಮೀನು ಹೊಂದಿರುವವರಿಗೆ ಶೇ.3 ರ ಬಡ್ಡಿದರದಲ್ಲಿ ಟ್ರ್ಯಾಕ್ಟರ್ ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಹಾಲೂ ಒಕ್ಕೂಟದ ಅಧ್ಯಕ್ಷ ಪ್ರಸನ್ನ, ಎಂಸಿಡಿಸಿಸಿ ಬ್ಯಾಂಕ್  ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News