ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಕ್ಷಣ ವಜಾಗೊಳಿಸಬೇಕು: ಎಸ್‍ಡಿಪಿಐ ಒತ್ತಾಯ

Update: 2021-07-04 17:00 GMT

ಬೆಂಗಳೂರು, ಜು.4: 2016ರ ನಾರದಾ ಸ್ಟಿಂಗ್ ಆಪರೇಷನ್ ಪ್ರಕರಣದ ಆರೋಪಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಭಾರತದ ಸಾಲಿಸಿಟರ್ ಜನರಲ್ (ಎಸ್‍ಜಿ) ತುಷಾರ್ ಮೆಹ್ತಾರನ್ನು ತಕ್ಷಣ ಅವರ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ನಾರದಾ ಪ್ರಕರಣದ ಆರೋಪಿಯಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಎಸ್‍ಜಿ ಅವರು ಸಿಬಿಐ ಏಜೆನ್ಸಿಯನ್ನು ಪ್ರತಿನಿಧಿಸುತ್ತಿದ್ದಾರೆ. ಗಂಭೀರ ಅಪರಾಧ ಪ್ರಕರಣದ ಆರೋಪಿಯೊಂದಿಗೆ ಎಸ್‍ಜಿ ಭೇಟಿಯು ಭಾರತದ ಸಾಲಿಸಿಟರ್ ಜನರಲ್ ಎಂಬ ಸಾಂವಿಧಾನಿಕ ಕರ್ತವ್ಯಗಳೊಂದಿಗಿನ ಹಿತಾಸಕ್ತಿಗೆ ವಿರುದ್ಧವಾಗಿದೆ. ಎಸ್‍ಜಿಯೊಂದಿಗಿನ ಸುವೇಂದು ಭೇಟಿಯು ಪ್ರಕರಣದ ಮೇಲೆ ಪ್ರಭಾವ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾರದಾ ಸ್ಟಿಂಗ್ ಆಪರೇಷನ್ ಮತ್ತು ಶಾರದಾ ಚಿಟ್ ಫಂಡ್ ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ತಿಂಗಳಲ್ಲಿ ಸಿಬಿಐ ಅಧಿಕಾರಿಗಳು ಟಿಎಂಸಿ ನಾಯಕರನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಆರೋಪಿಯಾದ ಸುವೇಂದು ಅಧಿಕಾರಿಯನ್ನು ಬಂಧಿಸಿರಲಿಲ್ಲ. ಬಿಜೆಪಿ ಸರಕಾರತದ ಕೃಪಾಕಟಾಕ್ಷದಿಂದ ಸುವೇಂದು ಅಧಿಕಾರಿ ಸಿಬಿಐ ಬಂಧನದಿಂದ ಮುಕ್ತರಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದೆಂದು ಅವರು ಆರೋಪಿಸಿದ್ದಾರೆ.

ಸುವೇಂದು ಅಧಿಕಾರಿ ಎಸ್‍ಜಿ ನಡುವೆ 30 ನಿಮಿಷಗಳ ಕಾಲ ಕಚೇರಿಯಲ್ಲಿ ಸಭೆ ನಡೆಸಿರುವುದು ಎಸ್‍ಜಿ ಕಚೇರಿಯ ವಿಶ್ವಾಸ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಗಂಭೀರ ಪ್ರಮಾದವು ಸಾಂವಿಧಾನಿಕ ಹುದ್ದೆಯ ವಿಶ್ವಾಸ ಮತ್ತು ಪ್ರಾಮಾಣಿಕತೆಯನ್ನು ಮತ್ತು ಅದರ ಔಚಿತ್ಯವನ್ನು ಪ್ರಶ್ನಿಸುವಂತೆ ಮಾಡಿದೆ ಸಾಲಿಸಿಟರ್ ಜನರಲ್ ಹುದ್ದೆಯ ಘನತೆ ಗೌರವವನ್ನು ಕಾಪಾಡಲು ಮತ್ತು ಅದರ ವಿಶ್ವಾಸವನ್ನು ರಕ್ಷಿಸಲು ಸಾಲಿಸಿಟರ್ ಜನರಲ್ ತುಷಾರ್‍ರನ್ನು ತಕ್ಷಣವೇ ವಜಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News