ಶೃಂಗೇರಿ: ಬಾಲಕಿ ಅತ್ಯಾಚಾರ ಪ್ರಕರಣ: 42 ಮಂದಿ ಬಂಧನ, 30 ಚಾರ್ಜ್‍ಶೀಟ್ ಸಲ್ಲಿಕೆ

Update: 2021-07-04 17:37 GMT

ಚಿಕ್ಕಮಗಳೂರು, ಜು.4: ಜಿಲ್ಲೆಯ ಶೃಂಗೇರಿ ತಾಲೂಕಿನ ಕಲ್ಲು ಕ್ರಷರೊಂದರಲ್ಲಿ ಶಾಲಾ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಕೃತ್ಯ ಎಸಗಿದ ಪ್ರಕರಣ ಸಂಬಂಧ ಪೊಲೀಸರು 42 ಮಂದಿ ಆರೋಪಿಗಳನ್ನು ಬಂಧಿಸಿದ್ದು, 30 ಚಾರ್ಜ್‍ಶೀಟ್‍ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಶೃಂಗೇರಿ ತಾಲೂಕಿನ ಕ್ರಷರೊಂದರಲ್ಲಿ ತನ್ನ ಚಿಕ್ಕಮ್ಮನೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದ ಎಸೆಸೆಲ್ಸಿ ಓದುತ್ತಿದ್ದ 15 ವರ್ಷದ ಬಾಲಕಿಯ ನಗ್ನ ವಿಡಿಯೋ ಚಿತ್ರೀಕರಿಸಿಕೊಂಡ ಆರೋಪಿಯೋರ್ವ ಆ ವಿಡಿಯೋ ಮುಂದಿಟ್ಟುಕೊಂಡು ಬಾಲಕಿಯನ್ನು ಬ್ಲಾಕ್‍ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಕೃತ್ಯಕ್ಕೆ ಬಳಸಿಕೊಂಡಿದ್ದ.  ಅಲ್ಲದೇ ಬಾಲಕಿಯ ಚಿಕ್ಕಮ್ಮನಿಗೆ ಹಣದ ಆಮಿಷ ತೋರಿಸಿ ಬೇರೆಯವರೂ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಕಾರಣಕರ್ತನಾಗಿದ್ದ ಎಂದು ಆರೋಪಿಸಲಾಗಿತ್ತು.

ಈ ಘಟನೆ ಸಂಬಂಧ ಜ.30ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಎಂಬವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅದರಂತೆ ಅವರು ಶೃಂಗೇರಿ ಪೊಲೀಸರಿಗೆ ದೂರು ನೀಡಿ, ಬಾಲಕಿಯನ್ನು ರಕ್ಷಿಸಿದ್ದರು. ದೂರಿನ ಮೇರೆಗೆ ಬಾಲಕಿ ಚಿಕ್ಕಮ್ಮ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಬಾಲಕಿ ಹೇಳಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಪ್ರಭಾವಿಗಳ ಸಂಬಂಧಿಕರು ಇದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದ ಆರೋಪಗಳ ಹಿನ್ನೆಲೆಯಲ್ಲಿ ಶೃಂಗೇರಿ ಠಾಣಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಬಳಿಕ ತನಿಖೆಯನ್ನು ಚಿಕ್ಕಮಗಳೂರು ಎಎಸ್ಪಿಯಾಗಿದ್ದ ಶೃತಿ ಅವರಿಗೆ ವಹಿಸಲಾಗಿತ್ತು.

ಎಎಸ್ಪಿ ಶೃತಿ ಸುಮಾರು 5 ತಿಂಗಳುಗಳ ಕಾಲ ಪ್ರಕರಣ ಸಂಬಂಧ ತನಿಖೆ ನಡೆಸಿದ್ದು, ಬಾಲಕಿ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿದ್ದ 42 ಮಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ 30 ಪ್ರತ್ಯೇಕ ಚಾರ್ಜ್‍ಶೀಟ್‍ಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಒಂದೇ ಪ್ರಕರಣದಲ್ಲಿ ಅತೀ ಹೆಚ್ಚು ಚಾರ್ಜ್‍ಶೀಟ್ ಸಲ್ಲಿಕೆಯಾದ ಪ್ರಕರಣ ಇದಾಗಿದೆ.

ಬಾಲಕಿ ಅತ್ಯಾಚಾರ ಪ್ರಕರಣ ಸಂಬಂಧ ಆರಂಭದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಹೆಸರುಗಳು ಕೇಳಿ ಬಂದಿದ್ದರಿಂದ ಪೊಲೀಸರ ಮೇಲೆ ಭಾರೀ ಪ್ರಭಾವ, ಒತ್ತಡ ಇತ್ತು ಎಂದು ಆರೋಪಿಸಲಾಗಿತ್ತು. ಅತ್ಯಾಚಾರಿ ಆರೋಪಿಗಳು ಒಬ್ಬೊಬ್ಬರಾಗಿ ಊರು ಬಿಟ್ಟು ತಲೆಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ತನಿಖೆ ಬಗ್ಗೆ ಶಂಕೆ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದ ಬಳಿ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದ ಎಎಸ್ಪಿ ಶೃತಿ, ಆರೋಪಿಗಳ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆಂದು ಹೇಳಲಾಗುತ್ತಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.

ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣ ಸಂಬಂಧ 42 ಆರೋಪಿಗಳನ್ನು ಬಂಧಿಸಲಾಗಿದೆ. 30 ಚಾರ್ಜ್‍ಶೀಟ್‍ಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

- ಅಕ್ಷಯ್, ಎಂ.ಎಚ್. ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News