ರಫೇಲ್ ಹಗರಣ: ಲಜ್ಜೆಗೆಟ್ಟ ಮೌನ!

Update: 2021-07-05 05:07 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶ ಕೊರೋನದ ಎರಡನೇ ಅಲೆಯ ಬಗ್ಗೆ ತಲೆಕೆಡಿಸುತ್ತಿರುವಾಗ, ಸರಕಾರ ರಫೇಲ್ ಮೂರನೇ ಅಲೆಗೆ ಸಿಲುಕಿಕೊಂಡಿದೆ. ಕೊರೋನಕ್ಕೆ ಮುನ್ನವೇ ಸರಕಾರವನ್ನು ರಫೇಲ್ ವೈರಸ್ ಕಾಡತೊಡಗಿತ್ತು. ‘ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ವಿರೋಧ ಪಕ್ಷದ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಒತ್ತಡಗಳ ಮೇಲೆ ಒತ್ತಡಗಳನ್ನು ಹೇರಿದ್ದರೂ, ‘ಪರೀಕ್ಷೆಯ ಅಗತ್ಯವೇ ಇಲ್ಲ’ ಎಂದು ಸರಕಾರವೇ ಸ್ವಯಂ ಘೋಷಿಸಿಕೊಂಡಿತ್ತು. ರಫೇಲ್ ಹಗರಣದ ಕುರಿತಂತೆ ತನಿಖೆಯಾಗಲಿ ಎಂದು ವಿವಿಧ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದರೂ ಯಾವುದೇ ಪ್ರಯೋಜನವಾಗಲಿಲ್ಲ. ‘ತನಿಖೆ ನಡೆಸುವ ಅಗತ್ಯವಿಲ್ಲ’ ಎಂದು ಸುಪ್ರೀಂಕೋರ್ಟ್ ಕೂಡ ಅಭಿಪ್ರಾಯ ಪಟ್ಟಿತು. ಸುಪ್ರೀಂಕೋರ್ಟ್ ಹೇಳಿಕೆಯನ್ನೇ ತನಗೆ ಸಿಕ್ಕಿದ ಕ್ಲೀನ್ ಚಿಟ್ ಎಂದು ಎನ್‌ಡಿಎ ಸರಕಾರ ಭಾವಿಸಿಕೊಂಡಿದೆ. ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೇಳುವುದಕ್ಕೂ, ತನಿಖೆ ನಡೆದು ‘ನಿರಪರಾಧಿ’ ಎಂದು ಹೊರಬರುವುದಕ್ಕೂ ವ್ಯತ್ಯಾಸವಿದೆ. ರಫೇಲ್ ಹಗರಣದ ಕುರಿತಂತೆ ಸಿಬಿಐ ಆಸಕ್ತಿ ವಹಿಸಿದಾಗ, ಆ ಸಂಸ್ಥೆಯ ರೆಕ್ಕೆಗಳನ್ನು ಕತ್ತರಿಸಿ ತನ್ನನ್ನು ತಾನು ರಕ್ಷಿಸಿಕೊಂಡಿತು. ರಫೇಲ್ ಹಗರಣ ತನಿಖೆಯಾಗಬೇಕು ಎಂದು ಒತ್ತಾಯಿಸುವವರನ್ನೆಲ್ಲಾ ‘ದೇಶದ ಭದ್ರತೆಯ ಬಗ್ಗೆ ಕಾಳಜಿಯಿಲ್ಲದವರು’ ಎಂದು ಬಾಯಿ ಮುಚ್ಚಿಸಿತು. ಮೋದಿ ಎರಡನೇ ಅವಧಿಗೆ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷ ಕೂಡ ‘ರಫೇಲ್ ಹಗರಣ’ದ ಕುರಿತಂತೆ ವೌನ ತಾಳಿತು.

ಭಾರತದಲ್ಲಿ ರಫೇಲ್ ಹಗರಣ ಶಾಶ್ವತ ಕಸದ ಬುಟ್ಟಿಗೆ ಸೇರುತ್ತದೆ ಎನ್ನುವಾಗಲೇ, ಅತ್ತ ಫ್ರಾನ್ಸ್‌ನಲ್ಲಿ ಈ ಹಗರಣ ಸುದ್ದಿಯಲ್ಲಿದೆ. ರಫೇಲ್ ಖರೀದಿಯಲ್ಲಿ ಫ್ರಾನ್ಸ್‌ನ ಕಂಪೆನಿ ಸಹಭಾಗಿತ್ವವನ್ನು ಹೊಂದಿರುವುದರಿಂದ, ಅಲ್ಲಿನ ಸರಕಾರ ಹಗರಣದ ಬಗ್ಗೆ ತಲೆಕೆಡಿಸಿಕೊಂಡಿದೆ. ಇದೀಗ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಫ್ರಾನ್ಸ್‌ನ ನ್ಯಾಯಾಧೀಶರೊಬ್ಬರಿಗೆ ವಹಿಸಲಾಗಿದೆ. ಫ್ರಾನ್ಸ್ ನ ತನಿಖಾ ವೆಬ್‌ಸೈಟ್ ಒಂದು ಹಗರಣದ ಬಗ್ಗೆ ಸ್ಫೋಟಕ ವರದಿಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದೆ. ಭಾರತ ಸರಕಾರ ಮತ್ತು ಡಸಾಲ್ಟ್ ನಡುವಿನ ಒಪ್ಪಂದದಲ್ಲಿ ಮಧ್ಯವರ್ತಿಗಳಾಗಿದ್ದವರಿಗೆ ಮಿಲಿಯಗಟ್ಟಲೆ ಯುರೋ ಮೊತ್ತವನ್ನು ನೀಡಲಾಗಿದೆ. ಈ ಹಣದ ಒಂದು ಭಾಗವನ್ನು ಭಾರತೀಯ ಅಧಿಕಾರಿಗಳಿಗೂ ನೀಡಲಾಗಿದೆ ಎಂದು ಈ ವೆಬ್‌ಸೈಟ್ ಇತ್ತೀಚೆಗೆ ಆರೋಪಿಸಿತ್ತು. ಈ ಬಗ್ಗೆ ಅಧಿಕೃತ ದೂರು ದಾಖಲಾದ ಬಳಿಕ, ತನಿಖೆಯ ಹೊಣೆಯನ್ನು ನ್ಯಾಯಾಧೀಶರೊಬ್ಬರಿಗೆ ಅಲ್ಲಿನ ಸರಕಾರ ವಹಿಸಿದೆ.

ರಫೇಲ್ ಒಪ್ಪಂದ ಪಾರದರ್ಶಕವಾಗಿರುವುದು ಫ್ರಾನ್ಸ್‌ಗಿಂತಲೂ ಭಾರತಕ್ಕೆ ಮುಖ್ಯವಾಗಿದೆ. ಫ್ರಾನ್ಸ್‌ನ ಪಾಲಿಗೆ ಇದೊಂದು ಹಣದ ಹಗರಣ ಮಾತ್ರವಾಗಿರಬಹುದು. ನಿಜಕ್ಕೂ ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದ್ದೇ ಆದರೆ ಭಾರತದ ರಕ್ಷಣಾ ವ್ಯವಸ್ಥೆಯ ಮೇಲೆ ಅದು ಭಾರೀ ದುಷ್ಪರಿಣಾಮವನ್ನು ಬೀರಬಹುದು. ರಫೇಲ್ ಒಪ್ಪಂದಕ್ಕೆ ಅಡಿಪಾಯ ಹಾಕಿದ್ದು ಯುಪಿಎ ಸರಕಾರ. ಆದರೆ ಆಗ, ಭಾರತದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಒಪ್ಪಂದದಲ್ಲಿ ಪಾಲುದಾರಿಕೆಯನ್ನು ಪಡೆದಿತ್ತು ಮತ್ತು ಈ ಒಪ್ಪಂದದಂತೆ ಕಡಿಮೆ ದರದಲ್ಲಿ ಹೆಚ್ಚು ವಿಮಾನಗಳನ್ನು ಹೊಂದುವ, ಹಾಗೆಯೇ ವಿಮಾನಗಳ ತಂತ್ರಜ್ಞಾನಗಳನ್ನು ತನ್ನದಾಗಿಸಿಕೊಳ್ಳುವ ಅವಕಾಶಗಳಿದ್ದವು. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಿಗೇ ರಫೇಲ್ ಒಪ್ಪಂದದಲ್ಲಿ ಮಹತ್ತರ ಬದಲಾವಣೆಗಳಾದವು. ಪಾಲುದಾರಿಕೆಯಿಂದ ಹಿಂದೂಸ್ತಾನ್ ಏರೋನಾಟಿಕ್ಸ್‌ನ್ನು ಹೊರಗಿಡಲಾಯಿತು. ಆ ಸ್ಥಾನಕ್ಕೆ ರಿಲಯನ್ಸ್ ಕಂಪೆನಿಯನ್ನು ತಂದು ಕೂರಿಸಲಾಯಿತು. ರಕ್ಷಣಾ ಉತ್ಪಾದನೆಯಲ್ಲಿ ಯಾವೊಂದು ಅನುಭವವೂ ಇಲ್ಲದ ಈ ಸಂಸ್ಥೆ ರಫೇಲ್ ಒಪ್ಪಂದದಲ್ಲಿ ಭಾಗಿಯಾದುದೇ ಪ್ರಶ್ನಾರ್ಹವಾಗಿದೆ. ಅಷ್ಟೇ ಅಲ್ಲ, ಹೆಚ್ಚು ದರವನ್ನು ಕೊಟ್ಟು ಕಡಿಮೆ ವಿಮಾನಗಳನ್ನು ಭಾರತ ಈ ಪರಿಷ್ಕೃತ ಒಪ್ಪಂದದಲ್ಲಿ ತನ್ನದಾಗಿಸಿಕೊಂಡಿತು. ಭಾರೀ ಅವ್ಯವಹಾರದ ವಾಸನೆ ಬಡಿಯುತ್ತಿದ್ದಂತೆಯೇ ದೇಶಾದ್ಯಂತ ಇದರ ವಿರುದ್ಧ ಪ್ರತಿಭಟನೆಗಳು ನಡೆದವು. ತನಿಖಾ ಸಂಸ್ಥೆಗಳೂ ಈ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದವು. ಆದರೆ ಸರಕಾರದ ನೇತೃತ್ವದಲ್ಲೇ ಎಲ್ಲ ಪ್ರಶ್ನೆಗಳನ್ನು ಅದುಮಲಾಯಿತು. ರಫೇಲ್ ಹಗರಣಕ್ಕೆ ಸಂಬಂಧಪಟ್ಟ ಕಾಗದಗಳು, ಮಹತ್ತರ ದಾಖಲೆಗಳು ಕಳವಾದವು. ಒಟ್ಟಿನಲ್ಲಿ , ಸರ್ವ ಪ್ರಯತ್ನದ ಮೂಲಕ ರಫೇಲ್ ಹಗರಣದ ತನಿಖೆ ನಡೆಯದಂತೆ ಸರಕಾರ ನೋಡಿಕೊಂಡಿತು. ಸರಕಾರ ತನಗೆ ತಾನೇ ಕ್ಲೀನ್‌ಚಿಟ್ ನೀಡಿತು.

ಈ ಹಿಂದೆ ಬೋಫೋರ್ಸ್ ಹಗರಣ ಬೆಳಕಿಗೆ ಬಂದಾಗಲೂ ತನಿಖೆ ನಡೆದಿತ್ತು. ಸುದೀರ್ಘ ಕಾಲದ ವಿಚಾರಣೆಯ ಬಳಿಕ ರಾಜೀವ್ ಗಾಂಧಿಯ ವೈಯಕ್ತಿಕ ಪಾತ್ರವನ್ನು ತನಿಖೆ ನಿರಾಕರಿಸಿ ಕ್ಲೀನ್ ಚಿಟ್ ನೀಡಿತ್ತು. ಬೋಫೋರ್ಸ್ ಹಗರಣಕ್ಕೆ ಹೋಲಿಸಿದರೆ ರಫೇಲ್ ಹಗರಣ ಹಲವು ಪಟ್ಟು ದೊಡ್ಡದು ಎನ್ನುವುದನ್ನು ಬೋಫೋರ್ಸ್ ಹಗರಣವನ್ನು ಬಯಲಿಗೆಳೆದಿದ್ದ ಅರುಣ್ ಶೌರಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ರಫೇಲ್ ವಿರುದ್ಧ ಪತ್ರಕರ್ತರು ಮತ್ತು ವಕೀಲರ ತಂಡ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿತ್ತು. ದೇಶದ ರಕ್ಷಣೆಗೆ ಸಂಬಂಧಪಟ್ಟ ವಿಷಯ ಇದಾಗಿರುವುದರಿಂದ, ಸ್ವತಃ ಮೋದಿಯವರೇ ರಫೇಲ್ ಹಗರಣದ ತನಿಖೆಗೆ ಆದೇಶ ನೀಡಬೇಕಾಗಿತ್ತು. ಹಗರಣದಲ್ಲಿ ತನ್ನ ಪಾತ್ರವಿಲ್ಲ ಎನ್ನುವುದಾದರೆ ತನಿಖೆ ನಡೆಸುವುದಕ್ಕೆ ಮೋದಿ ಸರಕಾರಕ್ಕೆ ಇರುವ ಸಮಸ್ಯೆಯಾದರೂ ಏನು? ತನಿಖೆಗೆ ಆದೇಶ ನೀಡಿದ್ದೇ ಆದರೆ ಅದು ವಿರೋಧಿಗಳ ಬಾಯಿ ಮುಚ್ಚಿಸುತ್ತದೆ ಮಾತ್ರವಲ್ಲ, ಮೋದಿಯವರ ಘನತೆಯನ್ನೂ ಹೆಚ್ಚಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ದೇಶದ ಭದ್ರತೆಗೆ ಸಂಬಂಧಿಸಿ ಜನರಲ್ಲಿರುವ ಆತಂಕಗಳನ್ನು ನಿವಾರಿಸಿದಂತಾಗುತ್ತದೆ. ವಿಪರ್ಯಾಸವೆಂದರೆ, ಯಾವುದೇ ತನಿಖೆಗೆ ಆದೇಶ ನೀಡದೇ ಇರುವ ಮೂಲಕ, ತನ್ನ ಮೇಲಿರುವ ಆರೋಪಗಳನ್ನು ಅವರು ಭಾಗಶಃ ಒಪ್ಪಿಕೊಂಡಂತೆ ಆಗಿದೆ.

ರಫೇಲ್ ಹಗರಣಕ್ಕೆ ಸಂಬಂಧಿಸಿ ಫ್ರಾನ್ಸ್ ತನಿಖೆಗೆ ಆದೇಶ ನೀಡಿದ ಬೆನ್ನಿಗೇ, ದೇಶಾದ್ಯಂತ ಮತ್ತೆ ರಫೇಲ್ ಹಗರಣ ಜೀವ ಪಡೆದಿದೆ. ಫ್ರಾನ್ಸ್ ಸರಕಾರವೇ ತನಿಖೆಗೆ ಆದೇಶ ನೀಡಿರುವಾಗ, ದೇಶದ ರಕ್ಷಣೆ ಮತ್ತು ಅರ್ಥವ್ಯವಸ್ಥೆಯ ಮೇಲೆ ಬಹಳಷ್ಟು ಪರಿಣಾಮ ಬೀರುವ ಈ ಹಗರಣದ ಬಗ್ಗೆ ಭಾರತವೇಕೆ ವೌನವಾಗಿದೆ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ತಕ್ಷಣ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಆದರೆ ಸರಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಒಪ್ಪಂದದಲ್ಲಿ ಪಾಲುದಾರನಾಗಿರುವ ದೇಶವೊಂದು ಹಗರಣದಲ್ಲಿ ಅವ್ಯವಹಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿರುವಾಗ, ಆ ಒಪ್ಪಂದದ ಪ್ರಮುಖ ಫಲಾನುಭವಿಯಾಗಿರುವ ಭಾರತ ಯಾಕೆ ಈವರೆಗೆ ಯಾವುದೇ ಆತಂಕವನ್ನು ವ್ಯಕ್ತಪಡಿಸಿಲ್ಲ? ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದರೆ ಅದರಿಂದ ಅತಿ ಹೆಚ್ಚು ಹಾನಿಯಾಗುವುದು ಭಾರತಕ್ಕೆ. ಹೀಗಿದ್ದರೂ ಈ ದೇಶದ ‘ಚೌಕೀದಾರ್’ ಯಾಕೆ ಇನ್ನೂ ತುಟಿ ಬಿಚ್ಚಿಲ್ಲ? ಇದೊಂದು ಲಜ್ಞೆಗೆಟ್ಟ ವೌನವಾಗಿದೆ. ಈ ದೇಶದ ಸೇನೆ ಮತ್ತು ರಕ್ಷಣೆಗೆ ಸಂಬಂಧಪಟ್ಟ ವಿಷಯವೊಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೊಳಗಾಗಿರುವಾಗ, ನಮ್ಮ ಸರಕಾರ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ ಎನ್ನುವುದು ಭವಿಷ್ಯದಲ್ಲಿ ‘ಚೌಕೀದಾರ್ ಚೋರ್’ ಎನ್ನುವ ಘೋಷಣೆಗಳಿಗೆ ಮರು ಚಾಲನೆ ನೀಡುವ ಸಾಧ್ಯತೆಗಳಿವೆ. ಅಂತಹದೊಂದು ಬೀದಿ ಘೋಷಣೆಗಳು ದೇಶಾದ್ಯಂತ ಮೊಳಗುವ ಮುನ್ನ, ಚೌಕೀದಾರ್ ಮಾತನಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News