ಮೋಹನ್ ಭಾಗವತ್ ಹೇಳಿಕೆಯಿಂದ ಯಾವುದೇ ಪರಿಣಾಮವಿಲ್ಲ, ಅದು ನಿಷ್ಪ್ರಯೋಜಕ: ಮಾಯಾವತಿ ಪ್ರತಿಕ್ರಿಯೆ

Update: 2021-07-05 17:11 GMT

ಲಕ್ನೋ, ಜು.5: ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನಿಷ್ಪ್ರಯೋಜಕವಾಗಿದೆ. ಯಾಕೆಂದರೆ ಸಂಘಪರಿವಾರ, ಬಿಜೆಪಿ ಹಾಗೂ ಕೇಂದ್ರ ಸರಕಾರ ಆಡುವ ಮಾತಿಗೂ ಮಾಡುತ್ತಿರುವ ಕಾರ್ಯಕ್ಕೂ ಅಜಗಜಾಂತರವಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ. 

ಗಾಝಿಯಾಬಾದ್ನಲ್ಲಿ ರವಿವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾಗವತ್, ಎಲ್ಲಾ ಭಾರತೀಯರ ಡಿಎನ್ಎ ಏಕರೀತಿಯದ್ದಾಗಿದೆ ಮತ್ತು ಹಿಂಸಾಚಾರವು ಹಿಂದುತ್ವಕ್ಕೆ ವಿರುದ್ಧವಾಗಿದೆ ಎಂದು ನೀಡಿರುವ ಹೇಳಿಕೆ ಯಾವುದೇ ಪರಿಣಾಮ ಬೀರದು. ಬಾಯಿಯಲ್ಲಿ ರಾಮನಾಮ, ಕಂಕುಳಲ್ಲಿ ಚೂರಿ ಎಂಬ ನಾಣ್ಣುಡಿಯನ್ನು ಇದು ನೆನಪಿಸುತ್ತದೆ. ದೇಶದಲ್ಲಿರುವುದು ಒಡಕುಂಟು ಮಾಡುವ ರಾಜಕೀಯ ಎಂದು ಭಾಗವತ್ ದೂಷಿಸಿದ್ದಾರೆ. ಆದರೆ ಇದು ಸರಿಯಲ್ಲ ಎಂದು ಮಾಯಾವತಿ ಹೇಳಿದರು.

ಗಾಝಿಯಾಬಾದ್ ನಲ್ಲಿ ಕೆಲವು ದೊಡ್ಡ ವಿಷಯಗಳ ಬಗ್ಗೆ ಭಾಗವತ್ ಮಾತನಾಡಿದ್ದಾರೆ. ಆದರೆ ಆರೆಸ್ಸೆಸ್ ನ ಸಹಕಾರ ಮತ್ತು ಬೆಂಬಲವಿಲ್ಲದಿದ್ದರೆ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ. ಬಿಜೆಪಿ ಮತ್ತು ಅದರ ಸರಕಾರಕ್ಕೆ ಆರೆಸ್ಸೆಸ್ ಕಣ್ಣುಮುಚ್ಚಿ ನೀಡುತ್ತಿರುವ ಬೆಂಬಲದಿಂದ ಜಾತಿವಾದ, ರಾಜಕೀಯ ದ್ವೇಷಸಾಧನೆ ಹಾಗೂ ಕೋಮು ಹಿಂಸಾಚಾರದಂತಹ ವಿಷ ಸಾಮಾನ್ಯ ಜೀವನಕ್ಕೆ ಕಂಟಕವಾಗಿ ಪರಿಣಮಿಸಿದೆ. ತನ್ನ ಪರಿಕಲ್ಪನೆಯನ್ನು ಬಿಜೆಪಿ ಮತ್ತು ಅದರ ಸರಕಾರ ಅನುಷ್ಟಾನಗೊಳಿಸುವಂತೆ ಮಾಡಲು ಆರೆಸ್ಸೆಸ್ಗೆ ಯಾಕೆ ಸಾಧ್ಯವಾಗುತ್ತಿಲ್ಲ ? ಎಂದವರು ಪ್ರಶ್ನಿಸಿದರು.
 
ಗಾಝಿಯಾಬಾದ್ ನಲ್ಲಿ ರವಿವಾರ ಮುಸ್ಲಿಮ್ ರಾಷ್ಟ್ರೀಯ ಮಂಚ್ ಸಂಘಟನೆ ಆಯೋಜಿಸಿದ್ದ ‘ಹಿಂದುಸ್ತಾನ್ ಫಸ್ಟ್, ಹಿಂದುಸ್ತಾನ್ ಬೆಸ್ಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾಗವತ್, ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿದ್ದು ಮುಸ್ಲಿಮರು ದೇಶಬಿಟ್ಟು ತೆರಳಬೇಕೆಂದು ವಾದಿಸುವವರು ತಮ್ಮನ್ನು ಹಿಂದುಗಳೆಂದು ಕರೆದುಕೊಳ್ಳುವಂತಿಲ್ಲ ಎಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News