ಜಿ.ಪಂ., ತಾ.ಪಂ. ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಕರಡಿನ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ: ಎಚ್.ಎಚ್.ದೇವರಾಜ್
ಚಿಕ್ಕಮಗಳೂರು, ಜು.5: ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ ಮೀಸಲಾತಿ ಪ್ರಕಟಗೊಳಿಸಿದ್ದು, ಕಳೆದ ಚುನಾವಣೆಯಲ್ಲಿ ನಿಗದಿಪಡಿಸಿದ್ದ ಮೀಸಲಾತಿಗಳು ಈ ಬಾರಿಯೂ ಪುನಾವರ್ತನೆಗೊಂಡಿವೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಮೀಸಲಾತಿಯಿಂದ ಆಡಳಿತ ಪಕ್ಷದ ನಾಯಕರಿಗೆ ಅನುಕೂಲವಾಗಲಿದೆ. 25 ವರ್ಷದ ಹಿಂದಿನಿಂದಲೂ ಆಲ್ದೂರು ಮತ್ತು ವಸ್ತಾರೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಇದುವರೆಗೂ ಮೀಸಲಾತಿ ಬದಲಾಗಿಲ್ಲ. ಮೀಸಲು ಕರಡು ಪ್ರತಿ ಸಿದ್ಧಪಡಿಸುವಾಗ ರಾಜಕೀಯ ಹಸ್ತಕ್ಷೇಪ ನಡೆದಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದ ಅವರು, ಕಡೂರು ತಾಲೂಕಿನ ಹೆಚ್ಚಿನ ಸ್ಥಾನ ಪರಿಶಿಷ್ಟ ಜಾತಿಗೆ ನಿಗದಿಯಾಗಿಲ್ಲ, ಕ್ಷೇತ್ರ ಪುನರ್ ವಿಂಗಡಣೆಯಲ್ಲಿಯೂ ರಾಜಕೀಯ ನಡೆದಿದೆ ಎಂದು ದೂರಿದರು.
ಆಲ್ದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ನಿಗದಿಯಾಗಿದೆ. ಶೃಂಗೇರಿ ತಾಲೂಕಿನಲ್ಲಿ ಹೆಚ್ಚು ಮಂದಿ ಪರಿಶಿಷ್ಟ ಪಂಗಡದವರು ವಾಸವಾಗಿದ್ದು, ಅಲ್ಲಿ ಹೆಚ್ಚು ಸ್ಥಾನಗಳು ನಿಗದಿಯಾಗಿಲ್ಲ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿಯಾಗಿಲ್ಲ, ರಾಜಕೀಯ ಹಸ್ತಕ್ಷೇಪವಾಗಿದೆ ಎಂದು ಆರೋಪಿಸಿದರು.
ಮೀಸಲಾತಿ ಕರಡು ಪ್ರತಿಯಲ್ಲಿನ ಮೀಸಲಾತಿಯನ್ನು ಗಮನಿಸಿದರೆ, ವಿರೋಧ ಪಕ್ಷಗಳ ಮೇಲೆ ಬುಲ್ಡೋಜರ್ ಓಡಿಸಲಾಗಿದೆ. ನಜೀರ್‍ಸಾಬ್ ಚಿಂತನೆಗೆ ಎಳ್ಳುನೀರು ಬಿಡಲಾಗಿದೆ. ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕಾದ ಆಡಳಿತ ಪಕ್ಷದ ನಾಯಕರು ಅಧಿಕಾರ ಕೇಂದ್ರೀಕರಣದತ್ತ ಹೆಜ್ಜೆ ಹಾಕಿದ್ದಾರೆ. ಪಕ್ಷ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ಹಿಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ರಾಜಕೀಯವಾಗಿ ನಡೆಸಿಕೊಂಡಿರುವುದು ಅವರ ದಲಿತ ಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಕಳೆದ ವರ್ಷ ಅತಿವೃಷ್ಟಿಗೆ ಒಳಗಾಗಿದ್ದ ಜನರಿಗೆ ಮೂಡಿಗೆರೆ ಶಾಸಕರು 15ದಿನದೊಳಗೆ ನ್ಯಾಯ ದೊರಕಿಸಿಕೊಡಲು ಮುಂದಾಗದಿದ್ದರೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರ ಮುಂದಾಳತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿಯನ್ನೂ ನಡಸಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ ಉಪಸ್ಥಿತರಿದ್ದರು.