ಸ್ಟಾನ್ ಸ್ವಾಮಿ ಬಲಿದಾನ ವ್ಯರ್ಥವಾಗದಿರಲಿ

Update: 2021-07-07 04:53 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ದೇಶ ಮತ್ತು ಈ ದೇಶದ ಅಧ್ಯಾತ್ಮಗಳೆರಡೂ ದುರಂತದೆಡೆಗೆ ಸಾಗುತ್ತಿದೆ. ಒಂದು ಕಾಲದಲ್ಲಿ ದಯಾನಂದ ಸರಸ್ವತಿ, ನಾರಾಯಣಗುರು, ಸ್ವಾಮಿ ವಿವೇಕಾನಂದರಂತಹ ಮಹಾತ್ಮರ ಮೂಲಕ ಈ ದೇಶದ ಅಧ್ಯಾತ್ಮ ಪುನರುಜ್ಜೀವಗೊಂಡವು. ಅದರ ಜೊತೆ ಜೊತೆಗೇ ಹಿಂದೂ ಧರ್ಮವು ಕೂಡ. ಇವರ ಮೂಲಕ ವಿಶ್ವ ಹಿಂದೂಧರ್ಮದ ಕಡೆಗೆ ಕಣ್ಣು ಹೊರಳಿಸುವಂತಾಯಿತು. ದುರದೃಷ್ಟವಶಾತ್, ಇಂದು ಕ್ರಿಮಿನಲ್ ಹಿನ್ನೆಲೆಗಳಿರುವ ನಕಲಿ ಸ್ವಾಮೀಜಿಗಳು, ಧರ್ಮ ರಕ್ಷಕರು ಹಿಂದೂ ಧರ್ಮದ ಕುರಿತಂತೆ ಮಾತನಾಡುತ್ತಿದ್ದಾರೆ. ಈ ದೇಶದಲ್ಲಿ ಹಿಂದೂ ಧರ್ಮ, ಅಧ್ಯಾತ್ಮದ ಕುರಿತಂತೆ ಅಪಾರ ಕಾಳಜಿ, ತಿಳುವಳಿಕೆಯಿರುವ ಸಂತರು ಇನ್ನೂ ಇದ್ದಾರೆ. ಆದರೆ ಅವರು ಒಬ್ಬೊಬ್ಬರಾಗಿ ವ್ಯವಸ್ಥಿತವಾಗಿ ಕೊಲ್ಲಲ್ಪಡುತ್ತಿದ್ದಾರೆ. 2011ರಲ್ಲಿ ಸ್ವಾಮಿ ನಿಗಮಾನಂದ ಎಂಬ ಸನ್ಯಾಸಿಯೊಬ್ಬರು ಗಂಗಾ ನದಿಗಾಗಿ ಹೋರಾಡುತ್ತಾ ಪ್ರಾಣ ತೆತ್ತರು. ಗಂಗಾ ನದಿಯ ತಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮರಳುಗಾರಿಕೆಗಳನ್ನು ವಿರೋಧಿಸಿ, ನದಿ ಮಾಲಿನ್ಯವನ್ನು ತಡೆಯುವುದಕ್ಕಾಗಿ ಇವರು ಉಪವಾಸ ಕೂತಿದ್ದರು. ಸುಮಾರು 115 ದಿನ ಇವರು ಸತ್ಯಾಗ್ರಹ ಮಾಡಿದರೂ ಸರಕಾರ ಇವರನ್ನು ಗಮನಿಸಲಿಲ್ಲ. ಜೂನ್ 13ರಂದು ಇವರು ಮೃತಪಟ್ಟರು. ಗಂಗಾನದಿಯನ್ನು ಉಳಿಸುವುದಕ್ಕಾಗಿ ಪ್ರಾಣ ತೆತ್ತ ಇನ್ನೋರ್ವ ಸಂತನ ಹೆಸರು ಗುರು ದಾಸ್ ಅಗರ್‌ವಾಲ್. ಪೂರ್ವಾಶ್ರಮದಲ್ಲಿ ಇಂಜಿನಿಯರ್ ಆಗಿದ್ದ ಇವರು ಬಳಿಕ ಸನ್ಯಾಸತ್ವ ಸ್ವೀಕರಿಸಿದರು. ಗಂಗಾ ನದಿಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ಸರಕಾರದ ವಿರುದ್ಧ ಇವರೂ ಉಪವಾಸ ಕೂತಿದ್ದರು. ಸುಮಾರು 111 ದಿನಗಳ ಆಮರಣಾಂತ ಉಪವಾಸ ಸತ್ಯಾಗ್ರಹದ ಬಳಿಕ ಇವರೂ ಪ್ರಾಣವನ್ನು ತೆತ್ತರು. ಗಂಗಾ ನದಿ ಉಳಿವಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಾ ಮೃತರಾದ ಇನ್ನೋರ್ವ ಸನ್ಯಾಸಿಯ ಹೆಸರು ಬಾಬಾ ನಾಗ್‌ನಾಥ್ ಯೋಗೇಶ್ವರ್. ಹೀಗೆ ಗಂಗಾ ನದಿಯನ್ನು ಸುತ್ತುವರಿದಿರುವ ಮಾಫಿಯಾಗಳ ವಿರುದ್ಧ ಹೋರಾಡುತ್ತಾ ಮೃತರಾದ ಹಲವು ಸನ್ಯಾಸಿಗಳ ಹೆಸರನ್ನು ಉಲ್ಲೇಖಿಸಬಹುದಾಗಿದೆ.

ಇವರ್ಯಾರು ಬೀದಿಯಲ್ಲಿ ನಿಂತು ‘ಹೊಡಿ, ಬಡಿ, ಕೊಲ್ಲಿ’ ಎಂದು ಭಾಷಣಗೈದು ರಾಜಕೀಯ ನಾಯಕರಾಗಲು ಆಸೆ ಪಟ್ಟವರಲ್ಲ. ಹಿಂದೂ ಧರ್ಮದ ಪ್ರಾಣ ಧಾರೆಯಾಗಿರುವ ಗಂಗಾನದಿಯನ್ನು ಉಳಿಸಿ ಎನ್ನುವ ಬೇಡಿಕೆಯನ್ನಷ್ಟೇ ಮುಂದಿಟ್ಟಿದ್ದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವೂ ಈ ಸನ್ಯಾಸಿಗಳ ಬೇಡಿಕೆಗಳು ಈಡೇರಿಲ್ಲ. ಈ ಸನ್ಯಾಸಿಗಳ ಸಾವಿನ ಫಲವನ್ನು ಇಂದು ನಾವು ಉಣ್ಣುತ್ತಿದ್ದೇವೆ. ಗಂಗಾನದಿಯಲ್ಲಿ ತೇಲಿ ಬರುತ್ತಿರುವ ನೂರಾರು ಹೆಣಗಳು, ಈ ಸನ್ಯಾಸಿಗಳ ಶಾಪ, ಕಣ್ಣೀರಿನ ಫಲವಲ್ಲದೆ ಇನ್ನೇನೂ ಅಲ್ಲ. ಹಿಂದೂ ಧರ್ಮವನ್ನು ಅರಿತ ನಿಜವಾದ ಅಧ್ಯಾತ್ಮರಾಗಿರುವ ಸಂತರು ಪ್ರಭುತ್ವದ ಮೂಲಕವೇ ಪರೋಕ್ಷವಾಗಿ ಕೊಲೆಯಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೊಲೆ, ಅತ್ಯಾಚಾರ, ದೊಂಬಿ, ವಿಷಪೂರಿತ ಭಾಷಣಗಳಿಗಾಗಿ ಮೈತುಂಬಾ ಪ್ರಕರಣಗಳನ್ನು ದಾಖಲಿಸಿಕೊಂಡ ನಕಲಿ ಸನ್ಯಾಸಿಗಳು ಹಿಂದೂಧರ್ಮದ ರಕ್ಷಕರೆಂದು ಕರೆಸಿಕೊಳ್ಳುತ್ತಿದ್ದಾರೆ.

ಇತ್ತ, ಗೋವುಗಳನ್ನು ಸಾಕಿ, ಉಳಿಸಿ ಬೆಳೆಸಿ ಈ ನಾಡಿಗೆ ಹಾಲು, ತುಪ್ಪ ಹಂಚಿದ ರೈತರು ಬೀದಿ ಪಾಲಾಗುತ್ತಿದ್ದಾರೆ. ಗೋಸಾಕಣೆಯೊಂದಿಗೆ ಸಂಬಂಧವೇ ಇಲ್ಲದ ರೌಡಿಗಳು, ಗೂಂಡಾಗಳು ‘ಗೋರಕ್ಷಕ’ರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ರೈತರು ಸಾಕಿದ ಜಾನುವಾರುಗಳ ಮೇಲೆ ಈ ದುಷ್ಕರ್ಮಿಗಳು ಹಕ್ಕು ಸಾಧಿಸುತ್ತಿದ್ದಾರೆ. ಅಕ್ಕಿ ಬೆಳೆವ ರೈತರನ್ನು ಉಗ್ರಗಾಮಿಗಳು ಎಂದು ಕರೆದು ದಮನಿಸುವ ಪ್ರಯತ್ನ ನಡೆಯುತ್ತಿದೆ. ಅತ್ತ ಈ ದೇಶಕ್ಕೆ ಬಾಂಬ್ ಹಾಕಿದ ಆರೋಪ ಹೊತ್ತ ಉಗ್ರಗಾಮಿಯೊಬರು ಸಂಸತ್ ಪ್ರವೇಶಿಸಿ, ದೇಶಕ್ಕೆ ಯೋಗದ ಕುರಿತಂತೆ ಭಾಷಣ ಮಾಡುತ್ತಾರೆ. ಆದಿವಾಸಿಗಳು, ಬುಡಕಟ್ಟು ಜನರು, ದಲಿತರ ಪರವಾಗಿ ಹೋರಾಟ ಮಾಡುವ ಸಂತರು, ಸಾಮಾಜಿಕ ಕಾರ್ಯಕರ್ತರು ‘ದೇಶದ್ರೋಹಿ’ಗಳಾಗಿ ಜೈಲು ಸೇರುತ್ತಿದ್ದಾರೆ. ಕ್ರಿಮಿನಲ್ ಕೃತ್ಯಗಳಿಗಾಗಿ ಜೈಲು ಸೇರಬೇಕಾದವರೆಲ್ಲ ದೇಶಭಕ್ತಿ, ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಿದ್ದಾರೆ.

ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಹಿರಂಗವಾಗಿ ಹಲ್ಲೆ ನಡೆಯಿತು. ಅವರನ್ನು ಸರಕಾರ ಸರ್ವ ರೀತಿಯಲ್ಲಿ ದಮನಿ, ಪರೋಕ್ಷವಾಗಿ ಕೊಂದು ಹಾಕಿತು. ಇಂದು ವಿವೇಕಾನಂದರು ಬದುಕಿದ್ದಿದ್ದರೆ ‘ದೇಶದ್ರೋಹ’ ‘ಹಿಂದೂ ವಿರೋಧಿ’ ಆರೋಪದಲ್ಲಿ ಜೈಲಲ್ಲಿರುತ್ತಿದ್ದರು. ಅವರ ಮೇಲೆ ಸರಕಾರ ಯುಎಪಿಎ ಕಾಯ್ದೆಯನ್ನು ನಿಸ್ಸಂಶಯವಾಗಿ ಜಾರಿಗೊಳಿಸಿ ಬಿಡುತ್ತಿತ್ತು ಏನ್ನುವುದನ್ನು ಬುಡಕಟ್ಟು ಜನರ ಹಕ್ಕಿಗಾಗಿ ಹೋರಾಡುತ್ತಿದ್ದ ಒಬ್ಬ ವೃದ್ಧ ಕ್ರೈಸ್ತ ಧರ್ಮಗುರು ಸ್ಟಾನ್ ಸ್ವಾಮಿಯ ಸಾವು ್ಮ ನಮಗೆ ಸ್ಪಷ್ಟ ಪಡಿಸಿದೆ. ಧರ್ಮಕ್ಕೆ ಸೇವೆಯ ವ್ಯಾಖ್ಯಾನವನ್ನು ಭಾರತೀಯರಿಗೆ ಕಲಿಸಿರುವುದು ಕ್ರಿಶ್ಚಿಯನ್ ಧರ್ಮಗುರುಗಳ್ಲು.

ಕಳೆದ ಮೂರು ಶತಮಾನಗಳಿಂದ ಕ್ರಿಶ್ಚಿಯನ್ ಧರ್ಮಗುರುಗಳು ಬಡವರ ಸೇವೆ, ಶಿಕ್ಷಣ, ಆರೋಗ್ಯಗಳಿಗಾಗಿ ಕೊಟ್ಟ ಕೊಡುಗೆಗಳನ್ನು ನಾವು ಮರೆತರೆ ಕೃತಘ್ನರಾಗಿ ಬಿಡುತ್ತೇವೆ. ಸ್ವಾತಂತ್ರಾನಂತರವೂ ಹಲವು ಕ್ರಿಶ್ಚಿಯನ್ ಧರ್ಮಗುರುಗಳು ದಮನಿತರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅಂತಹ ಸನ್ಯಾಸಿಯೊಬ್ಬರಲ್ಲಿ ಸ್ಟಾನ್ ಸ್ವಾಮಿ ಕೂಡ ಒಬ್ಬರು. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಎಲ್ಲ ಸಾಮಾಜಿಕ ಹೋರಾಟಗಾರರನ್ನು ಹಂತ ಹಂತವಾಗಿ ದಮನಿಸುತ್ತಾ ಬಂತು. ಸರಕಾರವನ್ನು ಪ್ರಶ್ನಿಸುವುದೇ ‘ದೇಶದ್ರೋಹ’ ಎನ್ನುವ ವ್ಯಾಖ್ಯಾನದ ತಳಹದಿಯಲ್ಲಿ ‘ಯುಎಪಿಎ’ ಕಾಯ್ದೆಯನ್ನು ಬಳಸಲಾರಂಭಿಸಿತು. ಇಂದು ಈ ದೇಶದ ತಳಸ್ತರದ ಜನರ ಪರವಾಗಿ ಧ್ವನಿಯೆತ್ತಿರುವ ನೂರಾರು ಜನರು ಯುಎಪಿಎ ಕಾಯ್ದೆಗೆ ಬಲಿಯಾಗಿದ್ದಾರೆ. ಸ್ಟಾನ್ ಸ್ವಾಮಿಯನ್ನು ಇದೇ ಯುಎಪಿಎ ಕಾಯ್ದೆಯನ್ನು ಬಳಸಿಕೊಂಡು ಸರಕಾರ ಪರೋಕ್ಷವಾಗಿ ಕೊಂದು ಹಾಕಿತು. ಇದನ್ನು ಕೊಲೆ ಎಂದು ಸಾಬೀತು ಮಾಡಲು ಸಾಧ್ಯವಿಲ್ಲದೇ ಇದ್ದರೂ, ಪಾರ್ಕಿನ್ಸನ್‌ನಂತಹ ಕಾಯಿಲೆಯಿಂದ ಬಳಲುತ್ತಿದ್ದ ಒಬ್ಬ ವೃದ್ಧ ಸನ್ಯಾಸಿಯನ್ನು ಜೈಲಲ್ಲಿ ಕೊಳೆ ಹಾಕಿ, ಕನಿಷ್ಠ ಅವರ ಕಾಯಿಲೆಗೆ ಅಗತ್ಯವಿರುವ ವಸ್ತುವನ್ನೂ ಅವರಿಗೆ ನೀಡದೆ ಅವರನ್ನು ಸತಾಯಿಸಿ ಹಂತ ಹಂತವಾಗಿ ಸಾಯಿಸಿರುವುದನ್ನು ಇನ್ನೇನೆಂದು ಕರೆಯಬೇಕು?

ಸ್ಟಾನ್ ಸ್ವಾಮಿ ಮತ್ತು ಇತರ ಸಾಮಾಜಿಕ ಕಾರ್ಯಕರ್ತರ ಮೇಲೆ ಹೊರಿಸಿದ ಆರೋಪಗಳು ಸುಳ್ಳು ಎನ್ನುವುದನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. ಸ್ಟಾನ್ ಸ್ವಾಮಿಯ ಕಂಪ್ಯೂಟರನ್ನು ಹ್ಯಾಕ್ ಮಾಡಿ ಅಲ್ಲಿ ದೋಷಾರೋಪಣೆಗೆ ಪೂರಕವಾಗಿರುವ ಸುಳ್ಳು ಪುರಾವೆಗಳನ್ನು ಅಳವಡಿಸಲಾಗಿತ್ತು ಎನ್ನುವುದನ್ನೂ ಈಗಾಗಲೇ ಮಾಧ್ಯಮಗಳು ವರದಿ ಮಾಡಿವೆ. ಜಾಮೀನು ನೀಡದೆ ಇರಲು ಸಕಾರಣಗಳಿಲ್ಲದೆ ಇದ್ದರೂ ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿತ್ತು. ‘ತನಗೆ ಮಧ್ಯಂತರ ಜಾಮೀನು ಮಂಜೂರು ಮಾಡದೇ ಇದ್ದರೆ ನಾನು ಸಾಯುತ್ತೇನೆ’ ಎಂದು ತನ್ನ ಆರೋಗ್ಯ ಸ್ಥಿತಿಯ ಗಂಭೀರತೆಯನ್ನು ಅವರು ನ್ಯಾಯಾಲಯಕ್ಕೆ ತೋಡಿಕೊಂಡಿದ್ದರು. ಆದರೂ ನ್ಯಾಯಾಲಯ ಕಿವುಡಾಗಿತ್ತು.

ಸ್ಟಾನ್ ಸ್ವಾಮಿಯ ಸಾವು, ಈ ದೇಶದ ನ್ಯಾಯ ವ್ಯವಸ್ಥೆಗೆ ಒಂದು ಶಾಶ್ವತ ಕಪ್ಪು ಚುಕ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಹಲವು ಕಪ್ಪು ಚುಕ್ಕೆಗಳನ್ನು ಹೊಂದಿರುವ ನ್ಯಾಯ ವ್ಯವಸ್ಥೆ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇಂದು ಎನ್‌ಐಎಗೆ ನಿಜವಾದ ಉಗ್ರರನ್ನು ದಮನಿಸುವುದಕ್ಕೆ ಇರುವ ಆಸಕ್ತಿಗಿಂತ, ಸಾಮಾಜಿಕ ಹೋರಾಟಗಾರರನ್ನು, ಈ ದೇಶಕ್ಕೆ ಮಿಡಿಯುವ ಸಂತರನ್ನು, ಸರಕಾರವನ್ನು ಪ್ರಶ್ನಿಸುವ ಹೋರಾಟಗಾರರನ್ನು ದಮನಿಸುವುದರಲ್ಲಿ ಹೆಚ್ಚು ಆಸಕ್ತಿಯಿದ್ದಂತಿದೆ. ಅಥವಾ ಪ್ರಭುತ್ವ ಎನ್‌ಐಎಯನ್ನು ಆ ನಿಟ್ಟಿನಲ್ಲಿ ಬಳಸಿಕೊಳ್ಳುತ್ತಿದೆ. ಸ್ಟಾನ್‌ಸ್ವಾಮಿಯ ಜೊತೆಗೆ ಯುಎಪಿಎ ಕಾಯ್ದೆಯ ದುರ್ಬಳಕೆಗೆ ಬಲಿಯಾದ ಇನ್ನಷ್ಟು ಸಾಮಾಜಿಕ ಹೋರಾಟಗಾರರು, ಕಾರ್ಯಕರ್ತರು ಜೈಲಲ್ಲಿದ್ದಾರೆ. ಇಂದು ಸ್ಟಾನ್ ಸ್ವಾಮಿಗೆ ಆಗಿರುವ ಅನ್ಯಾಯದ ವಿರುದ್ಧದ ಹೋರಾಟ, ಯುಎಪಿಎ ಎನ್ನುವ ‘ಸಂವಿಧಾನದ ಆಶಯಗಳಿಗೆ ಧಕ್ಕೆ’ ತರುವ ಕರಾಳ ಕಾನೂನಿನ ವಿರುದ್ಧದ ಹೋರಾಟವಾಗಿ ಪರಿವರ್ತನೆಯಾಗಬೇಕಾಗಿದೆ. ಇಲ್ಲವಾದರೆ, ದೇಶದ ಹಿತಾಸಕ್ತಿಯ ಪರವಾಗಿ ಧ್ವನಿಯೆತ್ತಿದವರೆಲ್ಲ ಯುಎಪಿಎ ಕಾಯ್ದೆಯಡಿಯಲ್ಲಿ ಜೈಲು ಬೇಕಾದೀತು. ಇಡೀ ದೇಶವೇ ಬಂಧೀಖಾನೆಯಾಗಿ ಪರಿವರ್ತನೆಯಾದೀತು. ಈ ನಿಟ್ಟಿನಲ್ಲಿ ಸ್ಟಾನ್ ಸ್ವಾಮಿಯವರ ಬಲಿದಾನವನ್ನು ವ್ಯರ್ಥವಾಗಲು ಬಿಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News