'ಪತ್ರಕರ್ತರನ್ನು ಬೆದರಿಸಲು ಕಾನೂನು ಪ್ರಕ್ರಿಯೆ ಬಳಕೆ'

Update: 2021-07-07 18:00 GMT
Photo: newslaundry.com

ಹೊಸದಿಲ್ಲಿ, ಜು. 7: ನ್ಯೂಸ್ ಲಾಂಡ್ರಿ ಯ ವರದಿಗಾರ್ತಿ ನಿಧಿ ಸುರೇಶ್ ಅವರ ವಿರುದ್ಧ ನ್ಯೂಸ್18ನ ದೀಪ್ ಶ್ರೀವಾತ್ಸವ ಮಾನನಷ್ಟ ದೂರು ದಾಖಲಿಸಿದ ಬಳಿಕ ಉತ್ತರಪ್ರದೇಶದ ಶಹಾಜಹಾನ್ಪುರ ಜಿಲ್ಲೆಯ ಸದಾರ್ ಬಜಾರ್ ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಜುಲೈ 4ರಂದು ನಿಧಿ ಸುರೇಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಇನ್ನೊಂದು ವೆಬ್ ಪೋರ್ಟಲ್ ಭಾಡಸ್ ಮೀಡಿಯಾದ ವರದಿಗಾರ ಮನೋಜ್ ಹಾಗೂ ಸಂಪಾದಕನ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ.

‘‘ನಿಧಿ ಸುರೇಶ್ ಅವರ ಟ್ವಿಟ್ಟರ್ ಹ್ಯಾಂಡಲ್ ತಿಹಾರ್ ಮತಾಂತರ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದೆ. ನಾನು ಹಣದ ಬೇಡಿಕೆ ಒಡ್ಡಿದೆ ಎಂದು ಹೇಳಿದೆ. ಅಲ್ಲದೆ, ದಿಲ್ಲಿ ನ್ಯಾಯಾಲಯದ ರಿಟ್ ಅನ್ನು ಉಲ್ಲೇಖಿಸಿದೆ. ಆದರೆ, ರಿಟ್ ಚಾನೆಲ್ ಅಥವಾ ವರದಿಗಾರನ ಹೆಸರನ್ನು ಉಲ್ಲಖಿಸಿಲ್ಲ. ಈ ಟ್ವಿಟ್ಟರ್ ಹ್ಯಾಂಡಲ್ ನನ್ನ ವಿರುದ್ಧ ಪಿತೂರಿ ನಡೆಸುತ್ತಿದೆ ಹಾಗೂ ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಪ್ರಚಾರ ಮಾಡುತ್ತಿದೆ’’ ಎಂದು ಎಫ್ಐಆರ್ನಲ್ಲಿ ದೂರುದಾರ ದೀಪ್ ಶ್ರೀವಾತ್ಸವ ಹೇಳಿದ್ದಾರೆ.

ಇಸ್ಲಾಂಗೆ ಮತಾಂತರವಾದ ಬಳಿಕ ಮಾದ್ಯಮಗಳು ತನಗೆ ಕಿರುಕುಳ ನೀಡಿದವು ಎಂದು ಆಯೇಷಾ ಅಲ್ವಿ ಹೆಸರಿನ ಮಹಿಳೆಯ ಆರೋಪವನ್ನು ಒಳಗೊಂಡ ವರದಿಯನ್ನು ಈ ಹಿಂದೆ ನಿಧಿ ಸುರೇಶ್ ಅವರು ಬರೆದಿದ್ದರು. ಆಯೇಷಾ ಅವರು ದಿಲ್ಲಿ ನ್ಯಾಯಾಲಯದಲ್ಲಿ ದೂರೊಂದನ್ನು ಕೂಡ ಸಲ್ಲಿಸಿ ಮೊಬೈಲ್ ಸಂಖ್ಯೆಯೊಂದರಿಂದ ಬೆದರಿಕೆ ಕರೆ ಸ್ವೀಕರಿಸಿರುವುದಾಗಿ ಉಲ್ಲೇಖಿಸಿದ್ದರು.

‘‘ತನ್ನ ಮತಾಂತರದ ಕುರಿತು ಸುದ್ದಿ ಪ್ರಕಟಿಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಒಡ್ಡಿದ್ದ. ಸುದ್ದಿ ಪ್ರಕಟವಾಗುವುದರಿಂದ ತಾನು ಬಂಧನವಾಗಲಿದ್ದೇನೆ ಎಂದು ಆತ ಹೇಳಿದ್ದ. ಸುದ್ದಿ ಪ್ರಕಟಿಸದೇ ಇರುವುದಕ್ಕೆ ಆತ ನನ್ನಲ್ಲಿ ಹಣದ ಬೇಡಿಕೆ ಒಡ್ಡಿದ್ದ. ನಾವು ಹಣ ನೀಡಲು ನಿರಾಕರಿಸಿದಾಗ ಮತ್ತೆ ಬೆದರಿಕೆ ಒಡ್ಡಿದ್ದ. ಅನಂತರ ನಮ್ಮಿಂದ ಬಲವಂತವಾಗಿ 20 ಸಾವಿರ ರೂಪಾಯಿ ಪಡೆದುಕೊಂಡ’’ ಎಂದು ದೂರಿನಲ್ಲಿ ಹೇಳಲಾಗಿದೆ.

ನಿಧಿ ಸುರೇಶ್ ಅವರು ಅದೇ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಆತ ನ್ಯೂಸ್ 18ನ ವರದಿಗಾರ ದೀಪ್ ಶ್ರೀವಾತ್ಸವ ಎಂದು ಗುರುತಿಸಿಕೊಂಡಿದ್ದ. ಇದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಪ್ರಕರಣದಲ್ಲಿ ದೀಪ್ ಶ್ರೀವಾತ್ಸವ್ ಅವರ ಪಾತ್ರದ ಬಗ್ಗೆ ಉಲ್ಲೇಖಿಸಲು ನ್ಯೂಸ್18 ಅನ್ನು ಸಂಪರ್ಕಿಸಲಾಗಿತ್ತು. ಆದರೆ, ನ್ಯೂಸ್18 ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಅವರು (ದೀಪ್ ಶ್ರೀವಾತ್ಸವ್) ಆಯೇಷಾಳಿಂದ ತಾನು ಹಣ ಸುಲಿಗೆ ಮಾಡಿದ್ದೇನೆ ಎಂಬ ಪ್ರತಿಪಾದನೆ ಸತ್ಯಕ್ಕೆ ದೂರವಾದದು ಎಂದು ನ್ಯೂಸ್ ಲಾಂಡ್ರಿಗೆ ತಿಳಿಸಿದ್ದಾರೆ ಎಂದು ನಿಧಿ ಸುರೇಶ್ ವರದಿಯಲ್ಲಿ ಬರೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಔಪಚಾರಿಕ ನೋಟೀಸು ನೀಡದೆ ನಮ್ಮ ವರದಿಗಾರ್ತಿ ಹಲವು ಫೋನ್ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ನ್ಯೂಸ್ಲಾಂಡ್ರಿಯ ವರದಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯೂಸ್ ಲಾಂಡ್ರಿ ಯ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಭಿನಂದನ್ ಸೆಖ್ರಿ, ಇದು ಮಾದ್ಯಮವನ್ನು ಬೆದರಿಸುವ ಅತಿ ದೊಡ್ಡ ಪ್ರಯತ್ನದ ಒಂದು ಭಾಗ ಎಂದಿದ್ದಾರೆ.

‘‘ದೇಶದಲ್ಲಿ ಪತ್ರಕರ್ತರನ್ನು ಬೆದರಿಸಲು ಎಫ್ಐಆರ್ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಬಳಸಲಾಗುತ್ತಿರುವುದು ಸ್ಪಷ್ಟ. ಇದು ವಿಷಾದಕರ. ಆದರೆ, ಪತ್ರಕರ್ತರು ಕೂಡ ಇದಕ್ಕೆ ಕೊಡುಗೆ ನೀಡುತ್ತಿರುವುದು (ದೀಪ್ ಶ್ರೀವಾತ್ಸವ್ ಅವರನ್ನು ಉಲ್ಲೇಖಿಸಿ) ಇನ್ನಷ್ಟು ವಿಷಾದಕರ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News