ಭೂಮಿಗೆ ಬಂದ ಗಂಧರ್ವ - ದಿಲೀಪ್‌

Update: 2021-07-08 04:19 GMT

ಭಾರತದ ಮೊದಲ ಮೆಥಡ್ ಆ್ಯಕ್ಟರ್ ದಿಲೀಪ್ ಕುಮಾರ್ ನಿಧನರಾಗಿದ್ದಾರೆ. ಅವರ ಸಾವಿನಿಂದ ನಟನೆಯ ಒಂದು ಪಂಥ ಮುಕ್ತಾಯಗೊಂಡಿದೆ ಎಂಬುದು ಕ್ಲೀಷೆಯೆನಿಸಿದರೂ ನಿಜ. ಸ್ವಾತಂತ್ರ ಪೂರ್ವದಲ್ಲಿಯೇ ನಟನೆಗೆ ಕಾಲಿಟ್ಟು ಅಖಂಡ ಭಾರತದ ಪ್ರೇಕ್ಷಕರಿಗೆ ಕಣ್ಮಣಿಯೆನಿಸಿದ ದಿಲೀಪ್ ಕುಮಾರ್, ದೇವ್ ಆನಂದ್ ಮತ್ತು ರಾಜ್ ಕಪೂರ್ ಸಮೂಹದಲ್ಲಿ ಅತ್ಯಂತ ಯಶಸ್ಸು ಕಂಡವರೆಂದರೆ ದಿಲೀಪ್ ಕುಮಾರ್. ಅವರ ಅಭಿನಯ ಅನೇಕ ತಲೆಮಾರುಗಳ ಕಲಾವಿದರ ಮೇಲೆ ಗಾಢಪ್ರಭಾವ ಬೀರಿತು. ಆದರೂ ತಮ್ಮ ಮೆಥಡ್ ಅಭಿನಯಕ್ಕೆ ಕಲಾಪಂಥವೊಂದನ್ನು ಹುಟ್ಟು ಹಾಕಿದರೂ ಅದರ ಏಕೈಕ ವಿದ್ಯಾರ್ಥಿಯಾಗಿಯೇ ಉಳಿದದ್ದು ಭಾರತ ಚಲನಚಿತ್ರರಂಗದ ವಿಸ್ಮಯಗಳಲ್ಲೊಂದು.

ಯಶಸ್ವಿ ಕಲಾವಿದರಾದರೂ ದಿಲೀಪ್ ಕುಮಾರ್ ಅವರು ಇತರ ಕಲಾವಿದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿನಯಿಸಲು ಹೋಗಲಿಲ್ಲ. ಬಂದ ಅವಕಾಶಗಳೆಲ್ಲವನ್ನು ಒಪ್ಪಿಕೊಳ್ಳಲಿಲ್ಲ. ಯಶಸ್ವಿ ಚಿತ್ರದ ಜಾಡು ಹಿಡಿದು ಅಂಥದೇ ಪಾತ್ರ ಹಿಡಿದು ಬಂದವರಿಗೆ ನಯವಾಗಿಯೇ ಬೆನ್ನು ತಿರುಗಿಸಿದರು. ತಾವು ಟೈಪ್‌ಕ್ಯಾಸ್ಟ್ ಆಗುವ ಅಪಾಯವನ್ನು ಪ್ರಜ್ಞಾಪೂರ್ವಕವಾಗಿಯೇ ತಿರಸ್ಕರಿಸಿದರು. ತಮ್ಮ ಹಿಂದಿನ ಚಿತ್ರಗಳಲ್ಲಿನ ಪಾತ್ರಗಳು ಪುನರಾವರ್ತನೆಯಾಗುವುದನ್ನು ತಡೆದ ಅವರು ಹೊಸ ಹೊಸ ಪಾತ್ರಗಳಿಗೆ ಹಂಬಲಿಸಿದರು. ಚಿತ್ರಕತೆಯನ್ನು ಸಂಪೂರ್ಣ ಓದಿ, ಪಾತ್ರವನ್ನು ಅಭ್ಯಸಿಸಿ ನಟನೆಗೆ ತಯಾರಾಗುತ್ತಿದ್ದ ದಿಲೀಪ್ ಕುಮಾರ್ ಅವರ ಜೊತೆಯಲ್ಲಿ ಅಭಿನಯಿಸಲು ಕಲಾವಿದರು ಇಷ್ಟಪಡುತ್ತಿದ್ದರು. ವೃತ್ತಿ ಬದುಕಿನ ಐವತ್ತನಾಲ್ಕು ವರ್ಷಗಳಲ್ಲಿ ಅವರು ಅಭಿನಯಿಸಿದ್ದು 63 ಚಿತ್ರಗಳಲ್ಲಿ ಮಾತ್ರ ಎಂದರೆ ಪಾತ್ರಗಳ ಆಯ್ಕೆಯಲ್ಲಿ ಅವರು ಎಷ್ಟು ಸೂಕ್ಷ್ಮವಾಗಿದ್ದರು ಎನ್ನುವುದಕ್ಕೆ ಸಾಕ್ಷಿ. ಮೊದಲ ಮೂರು ದಶಕಗಳಲ್ಲಿ ಅಭಿನಯಿಸಿದ 49 ಚಿತ್ರಗಳಲ್ಲಿ ಬೈರಾಗ್‌ನಂತಹ ಒಂದೆರಡು ಚಿತ್ರಗಳು ಸೋಲು ಕಂಡರೆ ಶೇ. 90ರಷ್ಟು ಚಿತ್ರಗಳು ಶತದಿನ, 25ವಾರ 59 ವಾರ ಪ್ರದರ್ಶನ ಕಂಡ ಚಿತ್ರಗಳೇ. ಮೊದಲ ಚಿತ್ರ ಜ್ವಾರ್ ಭಟ(1944) ದಿಂದ ಹಿಡಿದು ಮಿಲನ್, ಶಹೀದ್, ಮೇಲಾ, ಅನೋಖಾ ಪ್ಯಾರ್, ಅಂದಾಝ್, ಬಾಬುಲ್, ತರಾನಾ, ದೀದಾರ್, ಫುಟ್‌ಪಾತ್, ಹಲ್‌ಚಲ್, ಆನ್, ಅಮರ್, ದೇವದಾಸ್, ಆಝಾದ್, ನಯಾದೌರ್, ಯಹೂದಿ, ಮಧುಮತಿ, ಫೈಗಮ್, ಕೊಹಿನೂರ್. ಮುಘಲ್ ಎ ಅಝಮ್, ಲೀಡರ್, ದಿಲ್ ದಿಯಾ ದರ್ದ್ ಲಿಯಾ, ರಾಮ್ ಔರ್ ಶ್ಯಾಂ, ಆದ್ಮಿ, ಗೋಪಿ...ಒಂದೇ ಎರಡೇ ಅವರ ನಟನಾ ವೈವಿಧ್ಯದ ಅಮೋಘ ಯಶಸ್ಸು ಕಂಡ ಚಿತ್ರಗಳು.ಇವುಗಳಲ್ಲಿ ಕೆಲವು ದುರಂತ ಅಂತ್ಯ ಕಾಣುವ ನಾಯಕನ ಪಾತ್ರಗಳು. ದುರಂತದ ಪಾತ್ರಗಳಾದರೂ ಯಶಸ್ಸು ಕಂಡ ಪಾತ್ರಗಳಿಂದಾಗಿ ‘ಟ್ರಾಜಿಡಿ ಕಿಂಗ್’ ಬಿರುದು ಅವರಿಗೆ ಅಂಟಿಕೊಂಡಿತು. ಬಹುಶಃ ಸಾಯುವ ನಾಯಕನನ್ನು ನೋಡಲು ಪ್ರೇಕ್ಷಕರು ಮುಗಿಬಿದ್ದದ್ದು ದಿಲೀಪ್ ಕುಮಾರ್ ಚಿತ್ರಗಳಿಗೆ ಮಾತ್ರ ಇರಬೇಕು. ಪ್ರೇಮ ವಂಚಿತನ ಪಾತ್ರ, ಪ್ರೇಮಮಯಿ ಪಾತ್ರ, ತ್ಯಾಗಮಯಿ ಪಾತ್ರಗಳಲ್ಲಿ ದಿಲೀಪ್ ಅವರಷ್ಟು ತನ್ಮಯತೆಯಿಂದ ನೋವನ್ನು ಪ್ರೇಕ್ಷಕನಿಗೆ ದಾಟಿಸಿದ ಮತ್ತೊಬ್ಬ ನಟ ಸಿಗುವುದು ವಿರಳ. ಇದ್ದರೂ ಅವರಲ್ಲಿ ದಿಲೀಪ್ ಅವರ ನಟನೆಯ ಛಾಯೆಯನ್ನು ಸುಲಭವಾಗಿ ಗುರುತಿಸಬಹದು. 1961ರಲ್ಲಿ ವೃತ್ತಿಜೀವನದ ಉತ್ತುಂಗದಲ್ಲಿದ್ದ ದಿಲೀಪ್ ಕುಮಾರ್ ಅವರು ‘ಗಂಗಾ ಜಮುನಾ’ ಚಿತ್ರ ನಿರ್ಮಿಸಿದರು. ಅಷ್ಟು ಮಾತ್ರವಲ್ಲ, ಚಿತ್ರಕಥೆ ಬರೆದು, ಪ್ರತಿರೋಧದ ನಡುವೆಯೂ ‘ಅವಧಿ’ ಉಪಭಾಷೆಯಲ್ಲಿ ಸಂಭಾಷಣೆ ಬಳಸಲು ಒತ್ತಾಯಿಸಿದರು. ಅದು ಹಿಂದಿ ಚಿತ್ರರಂಗದಲ್ಲಿ ಢಕಾಯಿತ ಪ್ರಧಾನವಾದ ಚಿತ್ರಗಳನ್ನು ಉದ್ಘಾಟಿಸಿತು. ಚಿತ್ರದ ನಿರ್ಮಾಣ ಸಮಯದಲ್ಲಿ ಚಿತ್ರಹಿಂಸೆ ಅನುಭವಿಸಿದರೂ, ನಿತಿನ್ ಬೋಸ್ ಅವರ ನಿರ್ದೇಶನದ ಈ ಚಿತ್ರ ಬಿಡುಗಡೆಯಾದಾಗ ಬಾಕ್ಸ್ ಆಫೀಸ್ ಚಿಂದಿಯಾಯಿತು. ಮುಂದೆ ಅದೇ ಕಥೆ ನೂರಾರು ಚಿತ್ರಗಳಲ್ಲಿ ಬೇರೆ ಬೇರೆ ರೂಪ ಪಡೆದು ತೆರೆಗೆ ಬಂತು. ಅದೇ ಕಥೆಯನ್ನು ಆಧರಿಸಿ ಮಾರ್ಪಾಡುಗಳೊಡನೆ ರೂಪುಗೊಂಡ ‘ದೀವಾರ್’ ಅಮಿತಾಬ್ ಬಚ್ಚನ್ ವೃತ್ತಿ ಬದುಕಿನ ಯಶಸ್ವಿ ಕತೆ ಬರೆಯಿತು.

ತಮ್ಮ ಅಭಿನಯದಿಂದಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮೊದಲ ಭಾರತೀಯ ಕಲಾವಿದ ದಿಲೀಪ್ ಕುಮಾರ್. ಡೇವಿಡ್ ಲೀನ್ ಅವರು ತಮ್ಮ ಲಾರೆನ್ಸ್ ಆಫ್ ಅರೇಬಿಯಾ ಚಿತ್ರದ ಎರಡು ಪ್ರಮುಖ ಪಾತ್ರಗಳಲ್ಲೊಂದಾದ ಶರೀಫ್ ಅಲಿ ಪಾತ್ರಕ್ಕೆ ದಿಲೀಪ್ ಕುಮಾರ್ ಅವರನ್ನು ಪರಿಗಣಿಸಿದ್ದರು. ಆದರೆ ದಿಲೀಪ್ ನಿರಾಕರಿಸಿದ ಪಾತ್ರಕ್ಕೆ ಈಜಿಪ್ಟಿನ ನಟ ಓಮರ್ ಶರೀಫ್ ಆಯ್ಕೆಯಾಗಿ ಮುಂದೆ ಯೂರೋಪ್ ಮತ್ತು ಹಾಲಿವುಡ್‌ನಲ್ಲಿ ಪ್ರಖ್ಯಾತರಾದರು. ದಿಲೀಪ್ ಕುಮಾರ್ ಆ ಅವಕಾಶ ಏಕೆ ನಿರಾಕರಿಸಿದರೋ ಸ್ಪಷ್ಟವಾಗಿ ತಿಳಿಯದು.

ಅತಿ ಹೆಚ್ಚು ಫಿಲಂ ಫೇರ್ ಪ್ರಶಸ್ತಿ (9) ಗಳಿಸಿದ ್ಯಾತಿಯ ದಿಲೀಪ್ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯಿಂದ ವಂಚಿತರಾದವರು. ಆದರೆ ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದರು. ಪಾಕಿಸ್ತಾನವು ತನ್ನ ರಾಷ್ಟ್ರದ ಅತ್ಯನ್ನತ ನಾಗರಿಕ ಪ್ರಶಸ್ತಿ ಘೋಷಿಸಿದಾಗ ಶಿವಸೇನೆಯಿಂದ ವಿರೋಧ ಎದುರಿಸಿದರೂ ಸ್ವತಃ ವಾಜಪೇಯಿಯವರೇ ಕಲಾವಿದನನ್ನು ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಬಂಧಿಸಬಾರದೆಂದು ಹೇಳಿದಾಗ ವಿವಾದ ತಣ್ಣಗಾಯಿತು. ಹರೆಯದಲ್ಲಿ ಮಧುಬಾಲಳನ್ನು ಉತ್ಕಟವಾಗಿ ಪ್ರೀತಿಸಿದರೂ ಮದುವೆಯಾಗಲು ಸಾಧ್ಯವಾಗಲಿಲ್ಲ. ಮದುವೆಯಾದದು ತನಗಿಂತ 22 ವರ್ಷ ಕಿರಿಯಳಾದ ಸಾಯಿರಾಬಾನುವನ್ನು. ಕಲಾವಿದರ ಬದುಕು ಎಷ್ಟೇ ವಿಚಿತ್ರವಾದರೂ ಶಾಪಗ್ರಸ್ತ ಗಂಧರ್ವರು ಭೂಮಿಗೆ ಇಳಿದು ಬಂದು ತಮ್ಮ ಕಲೆಯಿಂದ ಜನರನ್ನು ಮುದಗೊಳಿಸಿ ಶಾಪವಿಮುಕ್ತಿ ಪಡೆದು ಹೊರಟು ಹೋಗುತ್ತಾರಂತೆ. ಅಂಥ ಗಂಧರ್ವರ ಸಾಲಿನಲ್ಲಿ ಬಂದವರು ದಿಲೀಪ್ ಕುಮಾರ್.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News