ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ ?
Update: 2021-07-08 22:06 IST
ಬೆಂಗಳೂರು, ಜು.8: ಪದವಿ ಕಾಲೇಜುಗಳನ್ನು ಜು.19ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಅಧಿಕೃತ ಆದೇಶವನ್ನು ಹೊರಡಿಸಬೇಕಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ಹತ್ತು ದಿನದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಒಂದು ಡೋಸ್ ಲಸಿಕೆ ಪಡೆದವರು ಕಾಲೇಜಿಗೆ ಬರಲು ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದು, ಜು.19ರೊಳಗೆ ಉಳಿದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ.
ಕಾಲೇಜು ಪ್ರಾರಂಭವಾದ ನಂತರ ಆಫ್‍ಲೈನ್ ಹಾಗೂ ಆನ್‍ಲೈನ್ ಎರಡು ತರಗತಿಗಳು ನಡೆಯಲಿದ್ದು, ವಿದ್ಯಾರ್ಥಿಗಳು ಎರಡರಲ್ಲಿ ಯಾವುದಾದರು ಒಂದು ಮಾದರಿಯಲ್ಲಾದರು ಕಡ್ಡಾಯವಾಗಿ ಇರುವಂತೆ ಆಯಾ ಕಾಲೇಜಿನ ಪ್ರಾಂಶುಪಾಲರ ಮುಖೇನ ತಿಳಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.