×
Ad

ಎಸೆಸೆಲ್ಸಿ ಪರೀಕ್ಷೆ ರದ್ದು ಕೋರಿ ಪಿಐಎಲ್: ಹೈಕೋರ್ಟ್ ನಲ್ಲಿ ಜುಲೈ 12ಕ್ಕೆ ವಿಚಾರಣೆ ನಿಗದಿ

Update: 2021-07-08 23:15 IST

ಬೆಂಗಳೂರು, ಜು.8: ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಿರುವಂತೆಯೇ ಎಸೆಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಜು.12ಕ್ಕೆ ನಿಗದಿಯಾಗಿದೆ.

ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳನ್ನು ಪಾಸು ಮಾಡಿದಂತೆಯೇ ರಿಪೀಟರ್ಸ್ ಗಳನ್ನೂ ಪರೀಕ್ಷೆ ಇಲ್ಲದೆ ಪಾಸು ಮಾಡಬೇಕು ಎಂದು ಕೋರಿ ಈ ಮೊದಲು ಪಿಐಎಲ್ ಸಲ್ಲಿಸಿದ್ದ ಅರ್ಜಿದಾರ ಎಸ್.ವಿ.ಸಿಂಗ್ರೇಗೌಡ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಎಸೆಸೆಲ್ಸಿ ಬೋರ್ಡ್ ನಿರ್ದೇಶಕರನ್ನು ಪ್ರತಿವಾದಿಯಾಗಿಸಲಾಗಿದೆ. 

ಅರ್ಜಿದಾರರ ಮನವಿ ಏನು: ಎಸೆಸೆಲ್ಸಿ ಪರೀಕ್ಷೆ ನಡೆಸಲು ಕಳೆದ ಫೆ.5ರಂದು ನೋಟಿಫಿಕೇಷನ್ ಹೊರಡಿಸಿದ್ದು, ಜುಲೈ 19ರಿಂದ 22ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಜೂನ್ 28ರಂದು ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಕೋವಿಡ್ ಕಾರಣಕ್ಕಾಗಿ ಕಳೆದ ವರ್ಷ ಸರಿಯಾಗಿ ತರಗತಿಗಳೇ ನಡೆದಿಲ್ಲ. ಅದರಲ್ಲೂ ಇಂಟರ್ ನೆಟ್, ಸ್ಮಾರ್ಟ್ ಫೋನ್ ಇಲ್ಲದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ ಲೈನ್ ಮೂಲಕವೂ ಕಲಿಯಲು ಸಾಧ್ಯವಾಗಿಲ್ಲ.

ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಕೋವಿಡ್ 3ನೇ ಅಲೆ ಎದುರಾಗುವ ಸಾಧ್ಯತೆ ಇದ್ದು 1 ರಿಂದ 15ನೇ ವಯಸ್ಸಿನ ಮಕ್ಕಳಿಗೆ ಸೋಂಕು ತಗಲುವ ಕುರಿತು ತಜ್ಞರು ಹೇಳಿದ್ದಾರೆ. ಪ್ರಸಕ್ತ ವರ್ಷ ರಿಪೀಟರ್ಸ್ ಸೇರಿದಂತೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದೆ. 

ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಮಕ್ಕಳು ಸಮಸ್ಯೆಗೆ ಸಿಲುಕಲಿದ್ದಾರೆ. ಈಗಾಗಲೇ ಸಿಬಿಎಸ್‍ಸಿ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಕಾರಣಕ್ಕಾಗಿಯೇ ಪರೀಕ್ಷೆ ರದ್ದುಪಡಿಸಿದೆ. ರಾಜ್ಯದಲ್ಲಿಯೂ ಪಿಯು ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಅಂತೆಯೇ, ಎಸೆಸೆಲ್ಸಿ ಪರೀಕ್ಷೆ ನಡೆಸದಂತೆ ಸರಕಾರ ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು. ಮತ್ತು ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿರುವ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News