ಮಾದರಿ ಬಾಡಿಗೆ ಕಾಯಿದೆ ಜಾರಿಗೆ ಕ್ರಮ: ಕಂದಾಯ ಸಚಿವ ಆರ್.ಅಶೋಕ್

Update: 2021-07-08 17:46 GMT

ಬೆಂಗಳೂರು, ಜು. 8: ನಾವು ಪ್ರಸ್ತುತ ಬಾಡಿಗೆ ಕಾಯ್ದೆಯನ್ನು ಸರಳೀಕರಿಸುತ್ತಿದ್ದೇವೆ. ಈ ಮೊದಲು, ಬಾಡಿಗೆಯನ್ನು ನಿಗದಿಪಡಿಸುವಲ್ಲಿ ಸರಕಾರದ ಪಾತ್ರವಿತ್ತು. ಈಗ ಬಾಡಿಗೆಯನ್ನು ಇಬ್ಬರೂ ಸೇರಿ (ಮಾಲಕರು ಮತ್ತು ಬಾಡಿಗೆದಾರರು) ನಿಗದಿಪಡಿಸಬೇಕು ಎಂದು ನಾವು ಈಗ ಪ್ರಸ್ತಾಪಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಲಕ ಮತ್ತು ಬಾಡಿಗೆದಾರ ಒಪ್ಪಂದಕ್ಕೆ ಬಂದರೆ, ಅವರು ಅದನ್ನು ಕಾನೂನುಬದ್ಧವಾಗಿ ಅಂತಿಮಗೊಳಿಸಬೇಕು ಮತ್ತು ಅದನ್ನು ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗುತ್ತದೆ. ಯಾವುದೇ ವಿವಾದವಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು 60 ದಿನಗಳೊಳಗೆ ಪರಿಹರಿಸುತ್ತಾರೆ.

ವಿವಾದಗಳನ್ನು 60 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಮತ್ತು ವಿಚಾರಣೆಯನ್ನು ಮುಂದೂಡಲು ಯಾರಾದರೂ ಯೋಜಿಸಿದರೆ, ಮೂರು ಅವಕಾಶಗಳಿಗಿಂತ ಹೆಚ್ಚು ಸಮಯ ಇರುವುದಿಲ್ಲ. ಪ್ರಸ್ತುತ, ಬೆಂಗಳೂರಿನಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆ. ಒಮ್ಮೆ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದರೆ, ಮಾಲಕರು ತಮ್ಮ ಬಾಡಿಗೆದಾರರನ್ನು ಪಡೆಯುತ್ತಾರೆಂಬ ಅಂದಾಜಿದೆ. ಹಾಗೆಯೇ ಬಾಡಿಗೆ ದರಗಳು ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಖಂಡಿತ ಅನುಕೂಲವಾಗುತ್ತದೆ.

ಇದು ಕೇವಲ ಪ್ರಸ್ತಾಪವಾಗಿದೆ ಮತ್ತು ನಾವು ಇದನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಪರಿಚಯಿಸುವ ಮೊದಲು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ, ಮಾದರಿ ಬಾಡಿಗೆ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು ಮತ್ತು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ಬಾಡಿಗೆ ಕಾನೂನುಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಎಲ್ಲ ರಾಜ್ಯಗಳಿಗೆ ರೂಪಾಂತರಕ್ಕಾಗಿ ಕಳುಹಿಸಿಕೊಟ್ಟಿದೆ' ಎಂದರು.

ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ: ಕೋವಿಡ್‍ನಿಂದ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರೆ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಸರಕಾರ ಈಗಾಗಲೇ ಘೋಷಿಸಿದಂತೆ, ಆ ಆದೇಶಕ್ಕೆ ಸಹಿ ಹಾಕಲಾಗಿದೆ. ಸಧ್ಯದಲ್ಲೇ ಇದನ್ನ ಕಾರ್ಯಗತಗೊಳಿಸಲಾಗುವುದು ಎಂದು ಸಚಿವ ಅಶೋಕ್ ಇದೇ ವೇಳೆ ಮಾಹಿತಿ ನೀಡಿದರು.

ಒಟ್ಟು 13 ಮಾನದಂಡಗಳನ್ನು ನಿಗದಿಪಡಿಸಿದ್ದು, ಬಿಪಿಎಲ್ ಕುಟುಂಬದ ಒಬ್ಬರಿಗೆ ಮಾತ್ರ, ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ ಮಾತ್ರವೇ, ನಿಗದಿತ ಮಾನದಂಡಗಳಡಿಯಲ್ಲಿ ಇರಬೇಕು. ಜಿಲ್ಲಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ದಾಖಲೆಗಳನ್ನು ದೃಢಪಡಿಸಬೇಕು ಎಂಬುದು ಸೇರಿದಂತೆ ಒಟ್ಟು 13 ಮಾನದಂಡಗಳನ್ನು ನಿಗದಿಪಡಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಕ್ಷೇತ್ರದಲ್ಲಿ ಪ್ರವಾಹ ತಡೆಗಟ್ಟಲು ಸರ್ವಸನ್ನದ್ಧ: ಪದ್ಮನಾಭನಗರ ಕ್ಷೇತ್ರದಲ್ಲಿ ಗುರುವಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದರು. ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾದ ದತ್ತಾತ್ರೇಯ ನಗರದಲ್ಲಿ ರಾಜಕಾಲುವೆಯ ನವೀಕರಣ ಕಾರ್ಯಕ್ಕೆ ಸಚಿವ ಅಶೋಕ್ ಚಾಲನೆ ನೀಡಿದರು. ನಂತರ, ಗುರುರಾಜ ಬಡಾವಣೆಯಲ್ಲಿ ಪ್ರವಾಹ ತಡೆಗಟ್ಟುವ ಕ್ರಮಗಳಿಗಾಗಿ ಭೂಮಿ ಪೂಜೆ ನಡೆಸಿದರು. ಅವರು ಸಮೃದ್ಧಿ ಲೇಔಟ್‍ನಲ್ಲಿ ಒಳಚರಂಡಿ ದುರಸ್ತಿ ಕಾರ್ಯವನ್ನು ಪರಿಶೀಲಿಸಿದರು.

ಅಂತಿಮವಾಗಿ, ಸಚಿವರು ಗಣೇಶ ಮಂದಿರ ವಾರ್ಡ್‍ನ ಸಿಟಿ ಬೆಡ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಹಾಗೆಯೇ ಕ್ಷೇತ್ರದ ವಿವಿಧ ವಾರ್ಡ್‍ಗಳಲ್ಲಿ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದ ವಿವಿಧ ಸಮುದಾಯದ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ಸಚಿವ ಆರ್.ಅಶೋಕ್ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News