ಸಮಸ್ಯೆ ಇರುವುದು ಹೃದಯದಲ್ಲಿ, ಸರ್ಜರಿ ನಡೆದಿರುವುದು ಕಿಡ್ನಿಗೆ

Update: 2021-07-09 04:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತನ್ನ ಸಂಪುಟಕ್ಕೆ ಭಾರೀ ಶಸ್ತ್ರ ಕ್ರಿಯೆ ನಡೆಸುವ ಮೂಲಕ, ಪ್ರಧಾನಿ ಮೋದಿಯವರು ಸರಕಾರ ಈವರೆಗೆ ವೆಂಟಿಲೇಟರ್‌ನಲ್ಲಿ ಇದ್ದುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕೊರೋನನಂತರದ ಬೆಳವಣಿಗೆಗಳನ್ನು ಎದುರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿರುವುದನ್ನು ಜಗತ್ತು ಆತಂಕದಿಂದ ನೋಡುತ್ತಿದ್ದರೂ, ‘ದೇಶ ಕೊರೋನವನ್ನು ಸಮರ್ಥವಾಗಿ ಎದುರಿಸಿದೆ’ ಎಂದು ಪ್ರಧಾನಿ ಮೋದಿಯವರು ತಮ್ಮನ್ನು ಸಮರ್ಥಿಸಿಕೊಂಡು ಬಂದಿದ್ದರು. ಎರಡನೆಯ ಅಲೆ ಸೃಷ್ಟಿಸಿದ ಅನಾಹುತಗಳು, ಜಗತ್ತಿನ ಮುಂದೆ ಭಾರತವನ್ನು ತಲೆತಗ್ಗಿಸುವಂತೆ ಮಾಡಿದವು. ಗಂಗಾನದಿಯಲ್ಲಿ ಸಾಲು ಸಾಲು ಹೆಣಗಳು ತೇಲಿದವು. ಆಕ್ಸಿಜನ್‌ಗಾಗಿ ಜನರು ಬೀದಿಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಲಾಕ್‌ಡೌನ್ ಈ ದೇಶದ ಅಳಿದುಳಿದ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಿತು. ಜನರು ಹಸಿವಿನಿಂದ ತತ್ತರಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಮೋದಿ ಈ ದೇಶವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುತ್ತಾರೆ ಎನ್ನುವ ‘ಅತಿ ನಿರೀಕ್ಷೆ’ಗಳನ್ನು ಜನರು ಹೊಂದಿದ್ದರು. ಆದರೆ ಅವರ ನಿರೀಕ್ಷೆಗಳು ಒಂದೊಂದಾಗಿ ಹುಸಿಯಾಗತೊಡಗಿದವು. ತನ್ನ ತಪ್ಪುಗಳನ್ನೆಲ್ಲ ನೆಹರೂ ತಲೆಗೆ ಕಟ್ಟಿ ರಕ್ಷಣೆ ಪಡೆಯುವ ಕಾಲವೂ ಮುಗಿದಿದೆ.

ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಸಮಾಧಾನಿಸುವುದು ಮೋದಿ ನೇತೃತ್ವದ ಸರಕಾರಕ್ಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲ ತಪ್ಪುಗಳನ್ನು ಕೆಲವು ನಿರ್ದಿಷ್ಟ ನಾಯಕರ ತಲೆಗೆ ಕಟ್ಟಿ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳುವ ಭಾಗವಾಗಿ ವಿಶೇಷ ಸರ್ಜರಿಯನ್ನು ಮಾಡಲಾಗಿದೆ.

ಮೋದಿ ನೇತೃತ್ವದ ಸರಕಾರ ಬಂದ ದಿನದಿಂದ, ಎಲ್ಲ ಖಾತೆಗಳನ್ನು ಪ್ರತಿನಿಧಿಸುತ್ತಾ ಬಂದಿರುವುದು ಪ್ರಧಾನಿಯೇ. ಮೊದಲ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಸುಶ್ಮಾ ಸ್ವರಾಜ್ ಇದ್ದರಾದರೂ, ವಿದೇಶಗಳಲ್ಲಿ ಸಿಲುಕಿಕೊಂಡ ಅಮಾಯಕರಿಗೆ ನೆರವು ನೀಡುವ ರಾಯಭಾರಿ ಕಚೇರಿಯ ಕೆಲಸಕ್ಕಷ್ಟೇ ಅವರು ಸೀಮಿತವಾದರು. ದೇಶದ ಬಗ್ಗೆ ಗಮನ ನೀಡಬೇಕಾಗಿದ್ದ ಪ್ರಧಾನಿ ವಿದೇಶ ಯಾತ್ರೆಗಳಲ್ಲಿ ಮುಳುಗಿರುತ್ತಿದ್ದರು. ರಕ್ಷಣಾ ಖಾತೆಯೊಂದು ಇತ್ತು ಎನ್ನುವುದೇ ಜನರಿಗೆ ಮರೆತು ಹೋಗಿತ್ತು. ರಕ್ಷಣೆಗೆ ಸಂಬಂಧಿಸಿ ನೇರವಾಗಿ ಸೇನೆಯ ಮುಖ್ಯಸ್ಥರೇ ಪತ್ರಿಕಾಗೋಷ್ಠಿ ನಡೆಸುವ ಪರಿಪಾಠವೊಂದು ಆರಂಭವಾಯಿತು. ಆರ್ಥಿಕ ಸಚಿವರಿಗೇ ನೋಟು ನಿಷೇಧದ ಕುರಿತಂತೆ ಅರಿವಿರಲಿಲ್ಲ. ಎಲ್ಲ ಅಧಿಕಾರವನ್ನೂ ಮೋದಿಯೇ ತನ್ನ ಕೈಯೊಳಗೆ ಇಟ್ಟುಕೊಂಡಿದ್ದರು. ಸ್ವತಂತ್ರವಾಗಿ ಆಲೋಚಿಸುವ ಮನಸ್ಸುಗಳು ಅವರ ಸರಕಾರದಲ್ಲಿ ಇದ್ದೇ ಇರಲಿಲ್ಲ. ಅವರು ಇರುವುದು ಮೋದಿಯ ಬಳಗಕ್ಕೆ ಇಷ್ಟವೂ ಇರಲಿಲ್ಲ. ಆದುದರಿಂದಲೇ, ಮಾನವ ಸಂಪನ್ಮೂಲದಂತಹ ಮಹತ್ವದ ಖಾತೆಗೆ ಒಬ್ಬ ಮಾಜಿ ಟಿವಿ ಸೀರಿಯಲ್ ನಟಿಯನ್ನು ತಂದು ಕೂರಿಸಲಾಯಿತು. ಎಲ್ಲ ಖಾತೆಗಳನ್ನು ಮೋದಿಯ ಕೈಗೊಂಬೆಗಳು ಅಲಂಕರಿಸಿದರು. ಆದುದರಿಂದ ಇಂದು ಎಲ್ಲ ಅನಾಹುತಗಳ ಹೊಣೆಯನ್ನೂ ನರೇಂದ್ರ ಮೋದಿಯೇ ವಹಿಸಬೇಕಾಗಿದೆ.

ಒಳ್ಳೆಯದಕ್ಕೆ ಮೋದಿಯೇ ಕಾರಣರಾಗಿದ್ದರೆ, ಕೆಡುಕುಗಳಿಗೂ ಅವರೇ ಹೊಣೆಗಾರರಾಗಿರಬೇಕಾಗುತ್ತದೆ. ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೊರೋನವನ್ನು ಈ ದೇಶಕ್ಕೆ ಆಹ್ವಾನಿಸಿದ್ದು ಯಾರು? ಕೊರೋನ ದೇಶಕ್ಕೆ ಕಾಲಿಡುವ ಮೊದಲೇ ವಿಮಾನ ನಿಲ್ದಾಣಗಳ ಮೇಲೆ ನಿರ್ಬಂಧಗಳನ್ನು ಹೇರುವ ಅವಕಾಶವಿತ್ತು. ಆದರೆ ಮೋದಿಯವರ ಪ್ರತಿಷ್ಠೆಯ ಕಾರ್ಯಕ್ರಮವಾಗಿರುವ ‘ನಮಸ್ತೆ ಟ್ರಂಪ್’ ಇದಕ್ಕೆ ಅಡ್ಡಿಯಾಯಿತು. ಪರಿಣಾಮವಾಗಿ ಇಡೀ ದೇಶ ಲಾಕ್‌ಡೌನ್ ಅನುಭವಿಸಬೇಕಾಯಿತು. ಎರಡನೇ ಅಲೆಯ ಕುರಿತಂತೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಪ್ರಧಾನಿ ಮೋದಿಯೇ. ಪಶ್ಚಿಮಬಂಗಾಳದ ಚುನಾವಣೆಯ ನೇತೃತ್ವವನ್ನು ವಹಿಸಿದವರು ನರೇಂದ್ರ ಮೋದಿ ಮತ್ತು ಅಮಿತ್ ಶಾ. ರ್ಯಾಲಿಯಲ್ಲಿ ಜನಸ್ತೋಮವನ್ನು ಸೇರಿಸಿ ‘ಇಷ್ಟು ದೊಡ್ಡ ಸಮಾವೇಶವನ್ನು ನಾನು ನೋಡಿದ್ದು ಇದೇ ಮೊದಲು’ಎಂದು ಭಾವುಕರಾದವರೂ ಪ್ರಧಾನಿ ನರೇಂದ್ರ ಮೋದಿ. ಎರಡನೆ ಅಲೆಯನ್ನು ಎದುರಿಸಲು ತಯಾರಿ ನಡೆಸಬೇಕಾಗಿದ್ದ ಪ್ರಧಾನಿಯೇ ಕೊರೋನವನ್ನು ಆಹ್ವಾನಿಸಿದರೆ, ಆರೋಗ್ಯ ಸಚಿವರಾದರೂ ಏನು ಮಾಡಬೇಕು? ಕೋತಿ ತುಪ್ಪ ತಿಂದು ಮೇಕೆಯ ಮೂತಿಗೆ ಒರೆಸಿದಂತೆ, ಇದೀಗ ತನ್ನ ತಪ್ಪುಗಳನ್ನೆಲ್ಲ ಇತರ ಸಚಿವರ ಮೂತಿಗೆ ಒರೆಸಿ ಅವರನ್ನು ಕಿತ್ತು ಹಾಕಿದ್ದಾರೆ. ಉಳಿದಂತೆ ಸಣ್ಣಪುಟ್ಟ ಭಿನ್ನಮತಗಳು, ಒತ್ತಡಗಳು ಕೆಲವರಿಗೆ ಸಚಿವ ಸ್ಥಾನ ದೊರಕುವಂತೆ ಮಾಡಿದೆ. ಇದಕ್ಕೆ ಹೊರತು ಪಡಿಸಿದರೆ, ಈ ಶಸ್ತ್ರಕ್ರಿಯೆಯಿಂದ ಸರಕಾರ ಜೀವ ಪಡೆದುಕೊಳ್ಳುತ್ತದೆ ಎಂದು ನಿರೀಕ್ಷಿಸುವಂತಿಲ್ಲ.

ಕರ್ನಾಟಕದ ನಾಲ್ವರಿಗೆ ರಾಜ್ಯ ಖಾತೆಗಳನ್ನು ನೀಡಲಾಗಿದೆ. ಹಾಗೆಯೇ ಸದಾನಂದ ಗೌಡರ ಕೈಯಿಂದ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. ಈ ಬದಲಾವಣೆಗಳೂ ಕರ್ನಾಟಕಕ್ಕೆ ವಿಶೇಷ ಲಾಭವನ್ನು ತಂದುಕೊಡಲಾರವು. ರಾಜ್ಯಖಾತೆಗಳು ಸಿಕ್ಕಿದಾಕ್ಷಣ ರಾಜ್ಯದ ಅಭಿವೃದ್ಧಿಯಾಗುವುದಿಲ್ಲ. ರಾಜ್ಯದ ಕುರಿತಂತೆ ಹಿತಾಸಕ್ತಿಯಿರುವ ನಾಯಕರಿಗೆ ಅಧಿಕಾರ ಸಿಕ್ಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಮೋದಿಯ ಹೆಸರಲ್ಲಿ ಚುನಾವಣೆಗೆ ಸ್ಪರ್ಧಿಸಿ, ಮೋದಿಯ ಹೆಸರನ್ನು ಭಜಿಸುತ್ತಲೇ ರಾಜಕೀಯ ನಡೆಸುತ್ತಿರುವ ಸಂಸದರು, ಸಚಿವರಲ್ಲಿ ರಾಜ್ಯಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಮುತ್ಸದ್ದಿತನವೇ ಇಲ್ಲ. ಹೀಗಿರುವಾಗ ಯಾರು ಸಚಿವರಾದರೂ ರಾಜ್ಯಕ್ಕೇನು ಪ್ರಯೋಜನ? ಒಟ್ಟಿನಲ್ಲಿ ಶಸ್ತ್ರಕ್ರಿಯೆ ನಡೆದಿರುವುದು ಬಿಜೆಪಿಯನ್ನು ಪುನರ್ ಸಂಘಟಿಸುವುದಕ್ಕಾಗಿ. ಅಲ್ಲಿರುವ ಅತೃಪ್ತಿಗಳನ್ನು ತಣಿಸುವುದಕ್ಕಾಗಿ. ಜೊತೆಗೆ, ದೇಶದ ಮುಂದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದಕ್ಕಾಗಿ. ಪ್ರಧಾನಿಯಾಗಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ.

ದೇಶದಲ್ಲಿ ಅಪೌಷ್ಟಿಕತೆ, ಬಡತನ ಹೆಚ್ಚಿದೆ. ರೂಪಾಯಿ ಬೆಲೆ ಪಾತಾಳ ತಲುಪಿದೆ. ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ದಿನಸಿ, ತರಕಾರಿಗಳ ಬೆಲೆಯೂ ಏರುತ್ತಿದೆ. ಇವುಗಳ ನಡುವೆ ನಡುವೆ ಕೊರೋನ ನಿರ್ವಹಣೆಯ ವೈಫಲ್ಯ ದೇಶವನ್ನು ಜರ್ಜರಿತ ಗೊಳಿಸಿದೆ. ಇವೆಲ್ಲದರ ಹೊಣೆಗಾರಿಕೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕಾಗಿದೆ. ಅವರ ಬದಲಿಗೆ ಪ್ರಧಾನಿಯಾಗಿ ಬಿಜೆಪಿಯೊಳಗಿರುವ ಹಿರಿಯ ಮುತ್ಸದ್ದಿಯೊಬ್ಬರನ್ನು ಆಯ್ಕೆ ಮಾಡಬೇಕು. ಇದೇ ಸಂದರ್ಭದಲ್ಲಿ ಗೃಹ ಸಚಿವರಾಗಿ ಅಮಿತ್ ಶಾ ಕೂಡ ವಿಫಲರಾಗಿದ್ದಾರೆ. ನಿರಂತರ ದಂಗೆ, ಹಿಂಸಾಚಾರ, ಪ್ರತಿಭಟನೆಗಳಿಂದ ದೇಶ ತತ್ತರಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಕೂಡ ರಾಜೀನಾಮೆ ನೀಡಬೇಕಾಗಿದೆ. ಈ ಇಬ್ಬರು ರಾಜೀನಾಮೆ ಕೊಟ್ಟು, ಉಳಿದಂತೆ ಇತರ ಸಚಿವರಿಗೆ ಅವರವರ ಖಾತೆಗೆ ಸಂಬಂಧಿಸಿ ಸ್ವತಂತ್ರವಾಗಿ ಯೋಚಿಸುವ ಅವಕಾಶವನ್ನು ನೀಡಿದರೆ, ಸರಕಾರ ಚೇತರಿಸಿಕೊಳ್ಳಬಹುದು. ದುರದೃಷ್ಟವಶಾತ್, ಸಮಸ್ಯೆ ಇರುವುದು ಹೃದಯದಲ್ಲಿ. ಶಸ್ತ್ರಕ್ರಿಯೆ ನಡೆದಿರುವುದು ಮೂತ್ರಕೋಶಕ್ಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News