×
Ad

ಕೋವಿಡ್ ನಿಂದ ಮೃತಪಟ್ಟ ರೈತರ ಸಾಲ ಮನ್ನಾ: ಶಾಸಕ ಜಿ.ಟಿ.ದೇವೇಗೌಡ

Update: 2021-07-08 23:27 IST

ಬೆಂಗಳೂರು, ಜು.8: ಕೋವಿಡ್ ಸೋಂಕಿಗೆ ಗುರಿಯಾಗಿ ಸಾವನ್ನಪ್ಪಿರುವ ರೈತರಿಗೆ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್‍ಗಳಿಂದ 1 ಲಕ್ಷ ರೂ. ಸಾಲ ಮನ್ನಾ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಗುರುವಾರ ನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಸೋಂಕಿನಿಂದ ರೈತ ವರ್ಗವೂ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಇನ್ನು, ಹಲವು ರೈತರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದು, ಈ ಸಂಬಂಧ ಮೃತರ 1 ಲಕ್ಷ ರೂ.ದೊಳಗಿನ ಸಾಲವನ್ನು ಮನ್ನಾ ಮಾಡಲಾಗುವುದು. ಈ ಕುರಿತು ಶೀಘ್ರದಲ್ಲಿಯೇ ಅಧಿಕೃತ ಸುತ್ತೋಲೆಯೂ ಹೊರಡಿಸಲಾಗುವುದು ಎಂದು ಹೇಳಿದರು.

ಗೃಹ ಸಚಿವ ಅಮಿತ್ ಶಾ, ನೂತನ ಸಹಕಾರ ಇಲಾಖೆಯ ಸಚಿವರಾಗಿದ್ದಾರೆ. ಅಲ್ಲದೆ, ಕೃಷಿ ಇಲಾಖೆಯಲ್ಲಿದ್ದ ಸಹಕಾರ ಇಲಾಖೆಯನ್ನು ಪ್ರತ್ಯೇಕ ಇಲಾಖೆಯನ್ನಾಗಿ ಮಾಡಬೇಕೆಂದು ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಈಗ ಕೇಂದ್ರ ಸರಕಾರ ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಸಚಿವರನ್ನು ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಸಹಕಾರ ಕ್ಷೇತ್ರವನ್ನು ಭಾರತದ ಆರ್ಥಿಕತೆಯ ಹೆಬ್ಬಾಗಿಲು ಎಂದು ಜವಾಹರ್ ಲಾಲ್ ನೆಹರೂ ಸಹ ಹೇಳಿದ್ದಾರೆ ಎಂದ ಅವರು, ಸಹಕಾರ ಕ್ಷೇತ್ರ ಶಕ್ತಿಯುತವಾಗಿ ಬೆಳೆಯುತ್ತದೆ. ಇದು ಕೃಷಿ, ಕೈಗಾರಿಕೆ, ಗುಡಿ ಕೈಗಾರಿಕೆ, ತೋಟಗಾರಿಕೆ ಪ್ರತಿಯೊಂದು ಕ್ಷೇತ್ರಕ್ಕೂ ಉದ್ಯೋಗ ಕೊಡುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News