ಸುಮಲತಾರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ: ಸಂಸದ ಪ್ರತಾಪ್ ಸಿಂಹ
ಮೈಸೂರು,ಜು.8: ಕೆಆರ್‍ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಗ್ಯುದ್ಧ ಮುಂದುವರಿದಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂತಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಂಸದೆ ಸುಮಲತಾರಿಗೆ ತಿರುಗೇಟು ನೀಡಿದರು.
ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಸದೆ ಸುಮಲತಾ ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕಾಗುತ್ತದೆ. ರಾಜಕೀಯವಾಗಿ ಯಾರೇ ಏನು ಬೇಕಾದರೂ ಹೇಳಿಕೆ ಕೊಡಬಹುದು. ಯಾರು ಕೂಡ ಎಲ್ಲಿಯೂ ಅಡ್ಡಿ ಪಡಿಸಿಲ್ಲ. ಇದೊಂದು ರಾಜಕೀಯ ಅಷ್ಟೇ ಎಂದು ಸುಮಲತಾ ಅಂಬರೀಶ್ ರನ್ನು ಲೇವಡಿ ಮಾಡಿದರು.
ಕೆಆರ್ಎಸ್ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಯಾವುದು ಸಮಸ್ಯೆ ಇಲ್ಲ ಅಲ್ಲಿಯ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಕೂಡ ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡುವುದಕ್ಕೂ ಬಿಡಲಿಲ್ಲ. ಸುಳ್ಳು ನೆಪಗಳನ್ನು ಹೇಳಿ ಕೆಲಸ ಮಾಡಲು ಅಡ್ಡಿಪಡಿಸಿದರು ಎಂದು ಅವರು ಪರೋಕ್ಷವಾಗಿ ಸುಮಲತಾ ವಿರುದ್ಧ ಆರೋಪ ಮಾಡಿದರು.
ಕೊರೋನ 3ನೇ ಅಲೆ ಕುರಿತು ಮುಖ್ಯಮಂತ್ರಿಗಳ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಚ್ಚರಿಕೆಯನ್ನು ಗಂಭೀರವಾಗಿ ಪರಿಣಗಣಿಸಬೇಕು. ಪಕ್ಕದ ಕೇರಳದಲ್ಲಿ ಕೊರೋನ ಜಾಸ್ತಿಯಾಗಿದೆ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು. ಕೊರೋನ ನಿಯಂತ್ರಣಕ್ಕೆ ಜನರ ಸಹಕಾರ ಕೂಡಾ ಮುಖ್ಯ ಎಂದರು.