ಸಚಿವ ಆರ್.ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಹೊರಿಸಿದ್ದ ಅಧಿಕಾರಿ ಸೇವೆಯಿಂದ ವಜಾ
ಚಿಕ್ಕಮಗಳೂರು, ಜು.9: ಕಂದಾಯ ಸಚಿವ ಆರ್.ಅಶೋಕ್ ಜಿಲ್ಲೆಯ ಶೃಂಗೇರಿ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಸಚಿವರ ಆಪ್ತ ಸಹಾಯಕನೊಬ್ಬ ತನ್ನ ಬಳಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದ ಪಟ್ಟಣದ ಉಪನೋಂದಣಾಧಿಕಾರಿ ಚೆಲುವರಾಜ್ ಎಂಬವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಸರಕಾರ ವಜಾಗೊಳಿಸಿ ಆದೇಶಿಸಿದೆ.
ಕಳೆದ ವರ್ಷ ಕಂದಾಯ ಸಚಿವ ಆರ್.ಅಶೋಕ್ ಶೃಂಗೇರಿ ಪಟ್ಟಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಚಿವರ ಆಪ್ತ ಸಹಾಯಕ ತನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಚಿವ ಆರ್.ಅಶೋಕ್ ಅವರ ಬಳಿ ಆರೋಪಿಸಿ ಬಂಧಿಸಿದ ಇಲಾಖಾಧಿಕಾರಿಗಳಿಗೆ ತನಿಖೆಗೆ ಒತ್ತಾಯಿಸಿ ದೂರು ಸಲ್ಲಿಸಿದ್ದರು. ಆದರೆ ಚೆಲುವರಾಜ್ ಅವರ ದೂರಿನ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ ಎನ್ನಲಾಗಿದ್ದು, ಆರ್.ಅಶೋಕ್ ಅವರ ಆಪ್ತ ಸಹಾಯಕನನ್ನು ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು.
ಸಚಿವ ಆರ್.ಅಶೋಕ್ ಅವರಂತಹ ಪ್ರಭಾವಿ ಸಚಿವರ ಪಿಎ ವಿರುದ್ಧವೇ ದೂರು ನೀಡಿದ್ದ ಅಧಿಕಾರಿ ಚೆಲುವರಾಜ್ ಅವರ ಬಗ್ಗೆ ಅಂದು ಜಿಲ್ಲಾದ್ಯಂತ ವ್ಯಾಪಕ ಚರ್ಚೆಯಾಗಿತ್ತು. ಈ ಬೆಳವಣಿಗೆಗಳ ಮಧ್ಯೆ ಸಬ್‍ರಿಜಿಸ್ಟ್ರಾರ್ ಚೆಲುವರಾಜ್ ಅವರನ್ನು ಹಳೆಯ ಕರ್ತವ್ಯ ಲೋಪ ಪ್ರಕರಣದಲ್ಲಿ ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಅಧಿಕಾರಿ ಚೆಲುವರಾಜ್ ಮಂಡ್ಯದಲ್ಲಿ ಸಬ್‍ರಿಜಿಸ್ಟ್ರಾರ್ ಆಗಿದ್ದ ವೇಳೆ ಇತರ 6 ಮಂದಿ ಅಧಿಕಾರಿಗಳು ಸರಕಾರದ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪ ಎದುರಿಸಿದ್ದರು. ಈ ಪ್ರಕರಣದ ಬಗ್ಗೆ ದೂರು ದಾಖಲಾಗಿತ್ತು. ಹಲವು ವರ್ಷಗಳ ಹಿಂದಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಲುವರಾಜ್ ಸೇರಿದಂತೆ 7 ಮಂದಿಯನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರಕಾರದ ಶಿಸ್ತು ಪ್ರಾಧಿಕಾರ ಹಾಗೂ ನೋಂದಣಿ ಪರಿವೀಕ್ಷಕ ಮೋಹನ್‍ರಾಜ್ ಆದೇಶಿಸಿದ್ದಾರೆ.
ಸರಕಾರದ ಈ ವಜಾ ಆದೇಶದ ವಿರುದ್ಧ ಚೆಲುವರಾಜ್ ಕೆಎಟಿ ಹಾಗೂ ನ್ಯಾಯಾಲಯದಲ್ಲಿ ಅಫೀಲು ಸಲ್ಲಿಸಲು ಮುಂದಾಗಿದ್ದು. ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕನ ವಿರುದ್ಧ ಲಂಚದ ಆರೋಪ ಮಾಡಿ ದೂರು ನೀಡಿದ್ದ ಘಟನೆ ಸಂಬಂಧ ಇಂತಹ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
"ಚೆಲುವರಾಜ್ ಮಂಡ್ಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಗರಣವೊಂದನ್ನು ಬಯಲಿಗೆ ತಂದು ದೂರು ನೀಡಿದ್ದರು. ಆದರೆ ಅಲ್ಲಿನ ಪ್ರಭಾವಿಗಳು ಚೆಲುವರಾಜ್ ವಿರುದ್ಧವೇ ಷಡ್ಯಂತ್ರ ನಡೆಸಿ ಹಗರಣದಲ್ಲಿ ಸಿಲುಕಿಸಿದ್ದರು. ಬಳಿಕ ಚೆಲುವರಾಜ್ ಶೃಂಗೇರಿಗೆ ವರ್ಗ ಆಗಿದ್ದರು. ಈ ವೇಳೆ ಸಚಿವ ಆರ್.ಅಶೋಕ್ ಶೃಂಗೇರಿಗೆ ಆಗಮಿಸಿದ್ದ ವೇಳೆ ಸಚಿವರ ಆಪ್ತಸಹಾಯಕರೊಬ್ಬರು ಚೆಲುವರಾಜ್ ಅವರನ್ನು ತನ್ನ ಬಳಿ ಕರೆಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ಚೆಲುವರಾಜ್ ದೂರು ನೀಡಿ ತನಿಖೆಗೆ ಕೋರಿದ್ದರು. ಆದರೆ ಯಾವುದೇ ತನಿಖೆ ನಡೆಯಲಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ಚೆಲುವರಾಜ್ ಅವರನ್ನು ರಾಜ್ಯ ಸರಕಾರ ಸೇವೆಯಿಂದ ಮಾಡಿದೆ. ಚೆಲುವರಾಜ್ ಪ್ರಾಮಾಣಿಕ ಅಧಿಕಾರಿ. ಸಚಿವ ಆರ್.ಅಶೋಕ್ ದ್ವೇಷ ಸಾಧಿಸಿ ಅವರನ್ನು ಕೆಲಸದಿಂದ ವಜಾ ಮಾಡಿಸಿದ್ದಾರೆ" ಎಂದು ಹೆಸರು ಹೇಳಲು ಇಚ್ಛಿಸದ ಶೃಂಗೇರಿ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರು 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.