ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡಿಸಿದ್ದು ಸತ್ಯ: ಸಂಸದೆ ಸುಮಲತಾ ಆರೋಪ
ಬೆಂಗಳೂರು, ಜು. 9: `ಕೀಳು ಮಟ್ಟದ ರಾಜಕೀಯಕ್ಕೆ ಅಂಬರೀಶ್ ಹೆಸರನ್ನು ಬಳಸಿಕೊಳ್ಳಬಾರದು' ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಬ್ಬರ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಅಂಬರೀಶ್ ಸ್ಮಾರಕಕ್ಕೆ ಒಪ್ಪಿಗೆ ಪಡೆಯಲು ನಟರಾದ ದೊಡ್ಡಣ್ಣ ಮತ್ತು ಶಿವರಾಂ ಅವರು ಅಂದಿನ ಸಿಎಂ ಎಚ್‍ಡಿಕೆ ಬಳಿ ಹೋದಾಗ ಅವರ ಮುಖಕ್ಕೆ ಪತ್ರ ಎಸೆದು ಅಪಮಾನ ಮಾಡಿದ್ದರು. ಅಂಬರೀಶ್ ಏನು ಸಾಧನೆ ಮಾಡಿದ್ದಾರೆಂದು ಸ್ಮಾರಕ ಮಾಡಬೇಕು ಎಂದಿದ್ದೂ ಅಲ್ಲದೆ, ಹಿರಿಯ ನಟರನ್ನು ಅಪಮಾನ ಮಾಡಿ ಕಣ್ಣೀರಿಡುವಂತೆ ಮಾಡಿದ್ದರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬರೀಶ್ ಬಗ್ಗೆ ಮಾತನಾಡಲು ಯೋಗತ್ಯೆ ಇಲ್ಲದವರು ಮಾತನಾಡುತ್ತಿದ್ದಾರೆ. ಅಂಬರೀಶ್ ಅಕ್ರಮ ಮಾಡಿದ್ದರೆ ದೂರು ನೀಡಲಿ. ಅಧಿಕಾರದಲ್ಲಿ ಇದ್ದಾಗ ಏಕೆ ಸುಮ್ಮನಿದ್ದಿರಿ. ಈ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಸುಮಲತಾ, `ಅಂಬರೀಶ್ ಸ್ಮಾರಕಕ್ಕೆ ಅನುಮೋದನೆ ನೀಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಹೊರತು ಬೇರೆ ಯಾರೂ ಅಲ್ಲ' ಎಂದು ತಿಳಿಸಿದರು.
ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡಿಸಿದ್ದು ಸತ್ಯ. ಸಿಬಿಐ ಅಧಿಕಾರಿಗಳು ಎರಡು ಬಾರಿ ನನ್ನ ಬಳಿ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆದಿಚುಂಚನಗಿರಿ ಮಠದ ಸ್ವಾಮೀಜಿಯವರ ಕರೆಗಳನ್ನೂ ಕದ್ದಾಲಿಸಲಾಗಿತ್ತು. ತಾವು ದೂರವಾಣಿ ಕದ್ದಾಲಿಕೆ ಮಾಡಿಸಿಲ್ಲ ಎಂದು ಎಚ್‍ಡಿಕೆ ಹೇಳಿದ್ದಾರೆ. ಕಳ್ಳ ಎಂದಿಗೂ ತಾನು ಕಳ್ಳತನ ಮಾಡಿದ್ದೇನೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಸುಮಲತಾ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಕುಮಾರಸ್ವಾಮಿ ಏಕೆ ಇಷ್ಟು ತಲೆ ಕೆಡಿಸಿಕೊಂಡಿದ್ದಾರೆ? ಅವರಿಗೆ ಸಂಬಂಧವಿಲ್ಲದ ವಿಚಾರವಾದರೆ ಏಕೆ ಅವರಿಗೆ ಆತಂಕ? ಸದ್ಯದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ, ಗಣಿ ಮತ್ತು ಭೂ ವಿಜ್ಞಾನ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ ಎಂದು ಸಂಸದೆ ಸುಮಲತಾ ಇದೇ ವೇಳೆ ಎಚ್ಚರಿಕೆ ನೀಡಿದರು.
ಅಂಬರೀಶ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಎಚ್‍ಡಿಕೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನನ್ನ ಮತ್ತು ಸುಮಲತಾ ಮಧ್ಯೆ ಅಪಾರ್ಥ ಕಲ್ಪಿಸಿ, ಪ್ರಚಾರಕ್ಕೆ ವಿಫಲಯತ್ನ ನಡೆಸಿದ್ದರು. ಆ ಸಂದರ್ಭದಲ್ಲಿ ಹೊಟೇಲ್‍ನಲ್ಲಿ ಇಬ್ಬರು ನಡೆದುಕೊಂಡು ಹೋಗುವ ಸಿಸಿ ಕ್ಯಾಮೆರಾ ದೃಶ್ಯವನ್ನು ಪಡೆದು ಅದನ್ನು ತಿರುಚಿ ಅಪಪ್ರಚಾರ ಮಾಡಲು ಪಿತೂರಿ ಮಾಡಿದ್ದರು. ಅಂಬರೀಶ್ ಅವರು ಇಲ್ಲ ಎಂದು ಕುಮಾರಸ್ವಾಮಿ ಇದೀಗ ಧ್ವನಿ ಎತ್ತರಿಸುವುದು ಬೇಡ.
-ರಾಕ್‍ಲೈನ್ ವೆಂಕಟೇಶ್ ಚಿತ್ರ ನಿರ್ಮಾಪಕ