ಹೈಕೋರ್ಟ್ ತಳಮಹಡಿ ಕಚೇರಿಗಳ ಸ್ಥಳಾಂತರ: ನಿಲುವು ತಿಳಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜು.9: ಬೆಂಗಳೂರಿನ ಹೈಕೋರ್ಟ್ ಕಟ್ಟಡದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ತಾತ್ಕಾಲಿಕವಾಗಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕಟ್ಟಡದ ನೆಲ ಮಹಡಿಗೆ ಸ್ಥಳಾಂತರಿಸುವ ಪ್ರಸ್ತಾವನೆ ಕುರಿತಂತೆ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಮುಂದಿನ 2 ವಾರಗಳಲ್ಲಿ ತಿಳಿಸುವಂತೆ ಹೈಕೋರ್ಟ್ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
ಹೈಕೋರ್ಟ್ ತಳ ಮಹಡಿಯಲ್ಲಿ ಕಾರ್ಯ ನಿರ್ವಹಣೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತುಮಕೂರಿನ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸರಕಾರಕ್ಕೆ ಈ ಸೂಚನೆ ನೀಡಿದೆ.
ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ಹೈಕೋರ್ಟ್ ಪ್ರಸ್ತಾವನೆಯನ್ನು ಉನ್ನತ ಶಿಕ್ಷಣ ಇಲಾಖೆ ಸಚಿವರ ಮುಂದೆ ಇಡಲಾಗಿದೆ. ಆದರೆ, ಈ ಸಂಬಂಧ ರಾಜ್ಯ ಸರಕಾರ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ಇಲ್ಲ. ಒಂದು ವಾರ ಕಾಲಾವಕಾಶ ನೀಡಿದರೆ ಸರಕಾರದ ನಿರ್ಧಾರವನ್ನು ತಿಳಿಸಲಾಗುವುದು ಎಂದರು.
ಮನವಿ ಪರಿಗಣಿಸದ ಪೀಠ, ಈ ವಿಚಾರವಾಗಿ ಖುದ್ದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರೇ ಪರಿಶೀಲಿಸಬೇಕು. ಹಾಗೆಯೇ, ಸರಕಾರದ ನಿರ್ಧಾರವನ್ನು 2 ವಾರದಲ್ಲಿ ನ್ಯಾಯಾಲಯದ ಮುಂದಿಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ರಾಜ್ಯ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠದ ಸಂಕೀರ್ಣದಲ್ಲಿ ಕೋರ್ಟ್ ಕೊಠಡಿಗಳು ಹಾಗೂ ನ್ಯಾಯಮೂರ್ತಿಗಳ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಚೇರಿಗಳು ಕಟ್ಟಡದ ನೆಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಕಟ್ಟಡದ ನೆಲ ಮಹಡಿಯಲ್ಲಿರುವ ಈ ಕೊಠಡಿಗಳಲ್ಲಿ ಗಾಳಿ ಬೆಳಕಿನ ಕೊರತೆಯಿದ್ದು, ಸಿಬ್ಬಂದಿ ಪ್ರತಿದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಸಿಬ್ಬಂದಿ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದುದರಿಂದ, ತಳಮಹಡಿಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ.