ನೀವೂ ಮಾಡಬೇಕಾದುದು ಸಾಕಷ್ಟಿದ್ದು, ಏನೂ ಮಾತನಾಡಬೇಡಿ: ಕುಮಾರಸ್ವಾಮಿಗೆ ಸಾ.ರಾ ಮಹೇಶ್ ಸಲಹೆ
ಮೈಸೂರು,ಜು.9: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರದ್ದಾಗಲಿ ಅಥವಾ ನಮ್ಮ ಪಕ್ಷದ್ದಾಗಲಿ ಯಾವುದೇ ಕೊಡುಗೆ ಸಂಸದೆ ಸುಮಲತಾ ಅವರ ಕುಟುಂಬಕ್ಕಿಲ್ಲ. ಹಾಗಾಗಿ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಿಲ್ಲ. ನೀವೂ ಮಾಡಬೇಕಾದುದು ಸಾಕಷ್ಟಿದ್ದು, ಹೀಗಾಗಿ ಏನೂ ಮಾತನಾಡಬೇಡಿ ಎಂದು ಕುಮಾರಸ್ವಾಮಿಯವರಿಗೆ ಕೈ ಮುಗಿದು ಕೇಳಿಕೊಳ್ಳುವುದಾಗಿ ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಸಂಸದೆ ಹಾಗೂ ಮಾಜಿ ಸಿಎಂ ನಡುವಿನ ವಾಕ್ ಸಮರ ಕುರಿತು ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ನಾನು ಕೂಡ ನಾಲೈದು ದಿನಗಳಿಂದ ಈ ವಿಚಾರದ ಹೇಳಿಕೆಯನ್ನು ಗಮನಿಸಿದ್ದೇನೆ. ಅಂಬರೀಶಣ್ಣನವರ ಧರ್ಮಪತ್ನಿ, ನನ್ನ ಕ್ಷೇತ್ರದ ಸಂಸದರಾಗಿದ್ದಾರೆ. ಕೋವಿಡ್ ಪ್ರಾರಂಭವಾದ ಬಳಿಕ ನನ್ನ ಕ್ಷೇತ್ರದಲ್ಲಿ ತುಂಬಾ ಹಳ್ಳಿ, ಹಳ್ಳಿಗೂ ಹೋಗಿ ತುಂಬಾ ಒತ್ತಡದಲ್ಲಿದ್ದಾರೆ. ಈ ಸಂದರ್ಭದಲ್ಲಿ ಯಾರೋ ಕೆಲ ಮಾಹಿತಿಯನ್ನು ಕೊಟ್ಟಿದ್ದರಿಂದ ಹಾಗೆ ಮಾತನಾಡಿದ್ದಾರೆ ಎಂದರು.
ಆದರೆ ಕನ್ನಂಬಾಡಿ ಅಣೆಕಟ್ಟೆ ಬಗ್ಗೆ ಮಾತನಾಡುವಾಗ ಒಂದು ಸಾರಿ ಯೋಚಿಸಿ ನೋಡಬೇಕಿತ್ತು. ಕನ್ನಂಬಾಡಿ ಅಣೆಕಟ್ಟೆ ಮೈಸೂರು, ಮಂಡ್ಯ ಜಿಲ್ಲೆಯ ಕಟ್ಟೆಯಲ್ಲ. ಇಡೀ ರಾಜ್ಯದ ನಿತ್ಯದ ಜೀವನಾಡಿಯಾಗಿದೆ. ಅದರ ಮಾಹಿತಿಯನ್ನು ಪರಿಶೀಲಿಸದೇ ಏಕಾಏಕಿ ಸಂಸದರು ಮಾತನಾಡಿದಾಗಿಯೂ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಿಲ್ಲ. ಕುಮಾರಣ್ಣ ಮಾಡಬೇಕಾದುದು ಸಾಕಷ್ಟು ಇದೆ. ಹೀಗಾಗಿ ಮಾತನಾಡಬೇಡಿ ಎಂದು ಕೇಳಿಕೊಂಡರು.
ನಾವು ಅಂಬರೀಶಣ್ಣನವರ ಹೆಸರು ಹೇಳಲ್ಲ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ ಎಂದರು. ಅಂಬರೀಶ್‍ರವರು ವೈಯಕ್ತಿಕವಾಗಿ ಅವರ ಆಸ್ತಿ ಇರಬಹುದು. ಆದರೆ, ನಾನು ಸಹ ಅವರ ಅಭಿಮಾನಿಯಾಗಿದ್ದಾನೆ. ಅವರಿಗಿರುವ ಗೌರವ ಯಾವುದು ಅಲ್ಲಗಳೆಯುವ ಮಾತೇ ಇಲ್ಲ. ಇಂದಿಗೂ ನಮ್ಮ ಹೃದಯದಲ್ಲಿ ಅವರಿದ್ದಾರೆ. ರಾಜಕಾರಣ ಎನೇ ಇರಲಿ. ಕುಮಾರಣ್ಣ ಅಂಬರೀಶ್ ಅವರ ನಿಧನದ ಸಂದರ್ಭದಲ್ಲಿ ನಡೆದುಕೊಂಡಿದ್ದನ್ನು ಒಂದು ಸಾರಿ ಸಂಸದರು ಯೋಚಿಸಬೇಕಿತ್ತು. ರಾಜಕಾರಣ, ಚುನಾವಣೆ ನಡೆಯುವುದೇ ಬೇರೆ ಲೆಕ್ಕಾಚಾರವಾಗಿದೆ. ನಾಯಕರು ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ಗೆದ್ದಿದ್ದೇನೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬ್ಯಾನರ್ ಇರುತ್ತದೆ. ಚುನಾವಣೆ ಬಂದಾಗ ಜನರು ತೀರ್ಮಾನ ಮಾಡುತ್ತಾರೆ.