×
Ad

ಕೊಲೆಗಡುಕ ಎಸ್‍ಡಿಪಿಐ, ಪಿಎಫ್‍ಐ ಬಗ್ಗೆ ನೀವು ಸಮರ್ಥನೆ ಮಾಡುತ್ತೀರಿ: ಸಿದ್ದರಾಮಯ್ಯ ವಿರುದ್ಧ ಸುನಿಲ್ ಕುಮಾರ್

Update: 2021-07-09 20:38 IST

ಬೆಂಗಳೂರು, ಜು. 9: `ದೇಶದ್ರೋಹ ಎಂದರೇನು ಎಂದು ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಫೊಲೀಸ್ ಬಂಧಿಸಿದೆ. ಇದು ನಮ್ಮ ಕಾಲ' ಎಂದು ಸರಕಾರದ ಮುಖ್ಯ ಸಚೇತಕ ಹಾಗೂ ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಈ ಹಿಂದೆ ಯಾವ ಪೋಸ್ಟ್ ಹಾಕಿದ್ದಾನೆ ಎಂಬ ಅರಿವಿಲ್ಲದೆ ಸಿದ್ದರಾಮಯ್ಯ ಸಮರ್ಥಿಸಿರುವುದು ಅವರ ಬದ್ಧತೆಯನ್ನು ಪ್ರಶ್ನಿಸುತ್ತದೆ. ಸಮರ್ಥಿಸುವ ಭರದಲ್ಲಿ ಸೈನಿಕರನ್ನು ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ' ಎಂದು ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ.

`ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತೀರಿ. ಕೆ.ಜೆ.ಹಳ್ಳಿ ಗಲಭೆ-ನಿಮ್ಮ ಸಮರ್ಥನೆ, ಮಂಗಳೂರು ಗಲಭೆ-ನಿಮ್ಮ ಸಮರ್ಥನೆ, ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ-ನಿಮ್ಮ ಸಮರ್ಥನೆ, ಹಿಂದು ಕಾರ್ಯಕರ್ತರ ಕಗ್ಗೊಲೆ-ನಿಮ್ಮ ಸಮರ್ಥನೆ, ಕೊಲೆಗಡುಕ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ-ನಿಮ್ಮ ಸಮರ್ಥನೆ ' ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News