ಸರಕಾರಿ ಅಭಿಯೋಜಕರ ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಿ: ಹೈಕೋರ್ಟ್ ನಿರ್ದೇಶನ

Update: 2021-07-09 15:18 GMT

ಬೆಂಗಳೂರು, ಜು.9: ಕೋರ್ಟ್‍ಗಳಲ್ಲಿ ಸರಕಾರಿ ಅಭಿಯೋಜಕರ ಕೊರತೆ ಉಂಟಾದರೆ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಹಾಗೂ ಪ್ರಕರಣಗಳಲ್ಲಿನ ಆರೋಪಿಗಳ ಶೀಘ್ರ ವಿಚಾರಣೆಯ ಹಕ್ಕು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡುವಂತೆ ನಿರ್ದೇಶಿಸಿದೆ. 

ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಅಭಿಯೋಜಕರ ಕೊರತೆ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು. 

ವಕೀಲರ ವಾದ ಆಲಿಸಿದ ನ್ಯಾಯಪೀಠ, 2019ರ ಸೆ.27ರಿಂದ ನ್ಯಾಯಾಲಯ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ಕೊರತೆ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಕಾಲಕಾಲಕ್ಕೆ ನಿರ್ದೇಶಿಸುತ್ತಲೇ ಬರುತ್ತಿದೆ. ಈ ಸಂಬಂಧ ಗೃಹ ಇಲಾಖೆ ಕಾರ್ಯದರ್ಶಿ 12 ತಿಂಗಳ ಒಳಗೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಸರಕಾರವೇ ಹೇಳಿದಂತೆ ಈಗಾಗಲೇ ಒಂದು ವರ್ಷ ಮುಗಿದು ಹೋಗಿದೆ. ಹೀಗಾಗಿ ಸರಕಾರ ತಡ ಮಾಡದೆ ಪಿಪಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸೂಚಿಸಿತು.

ಖಾಲಿ ಇರುವ ಎಪಿಪಿ, ಸೀನಿಯರ್ ಎಪಿಪಿ ಹಾಗೂ ಪಿಪಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಸರಕಾರ ಹೇಳಿರುವಂತೆ ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಕ ಮಾಡಿಕೊಳ್ಳುವುದಾಗಿ ಹೇಳಿದೆ. ಆದರೆ ಖಾಲಿ ಇರುವ 254 ಹುದ್ದೆಗಳಲ್ಲಿ 205ಕ್ಕೆ ಅಷ್ಟೇ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಹೀಗಾಗಿ ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಆ.27ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News