ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಚಿವ ಸಿ.ಸಿ.ಪಾಟೀಲ್ ಸೂಚನೆ

Update: 2021-07-09 15:35 GMT

ಬೆಂಗಳೂರು, ಜು. 9: `ಬೆಂಗಳೂರಿನಲ್ಲಿ ಮಾತ್ರ ಕೈಗಾರಿಕೆಗಳು ಅಭಿವೃದ್ಧಿಯಾದರೆ ಸಾಲದು, ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳು ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ' ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ 2020-21ನೆ ಸಾಲಿನಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಕೈಗಾರಿಕೆಗಳ ಅಭಿವೃದ್ಧಿಗಾಗಿ ಸರಕಾರ ನೀಡುವ ಹಣ ಸದುಪಯೋಗವಾಗಬೇಕು. ವಿವಿಧ ಯೋಜನೆಯಡಿ ನೀಡಲಾದ ಪ್ರೋತ್ಸಾಹ ಧನ ಮತ್ತು ರಿಯಾಯಿತಿಗಳು ಸಮರ್ಪಕವಾಗಿ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಅಧಿಕಾರಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು' ಎಂದರು.

`ಸಹಾಯಧನ ಪಡೆದ ನಂತರ ಕೈಗಾರಿಕೆಗಳು ಸಮರ್ಪಕವಾಗಿ ನಡೆಯುತ್ತಿವೆಯೆ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೇವಲ ಸಹಾಯಧನ ಪಡೆಯುವ ಸಲುವಾಗಿ ಅಥವಾ ಬೇನಾಮಿಯಾಗಿ ಅರ್ಜಿ ಸಲ್ಲಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು' ಎಂದ ಅವರು, `ಎಂಎಸ್‍ಎಂಇ ಕೈಗಾರಿಕಾ ಘಟಕಗಳಿಗೆ ಕಳೆದ ಸಾಲಿನಲ್ಲಿ ಕೈಗಾರಿಕಾ ನೀತಿಯಡಿ 114 ಕೋಟಿ ರೂ.ಸಹಾಯಧನ ಮತ್ತು ಕೃಷಿ ನೀತಿಯಡಿ 165 ಕೋಟಿ ರೂ.ಸಹಾಯಧನ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ಎಂಎಸ್‍ಇ ಸಿಡಿಪಿ ಕ್ಲಸ್ಟರ್ ಯೋಜನೆಗೆ 3.08 ಕೋಟಿ ರೂ., ಕೆಎಸ್‍ಸಿಸಿಎಫ್‍ಎಲ್, ಕೆಎಸ್‍ಸಿಡಿಸಿ ಕಿಲ್ಟ್ ಕೃಪುಡ್ಸ್ ತರಬೇತಿ ವಿಚಾರ ಸಂಕಿರಣ ವೆಚ್ಚಕ್ಕೆ 7 ಕೋಟಿ ರೂ., ಸಿಎಂ ಸ್ವಯಂ ಉದ್ಯೋಗ ಸಹಾಯಧನ, ಕೆಎಸ್‍ಎಫ್‍ಸಿ ಶೇ.6ರ ಬಡ್ಡಿ ಸಹಾಯಧನ, ಕೈಗಾರಿಕಾ ನೀತಿಯಡಿ ಪ್ರೋತ್ಸಾಹ ಮತ್ತು ರಿಯಾಯಿತಿಗಾಗಿ 114.04 ಕೋಟಿ ರೂ., ಖಾದಿ ಮತ್ತು ಗ್ರಾಮೋದ್ಯೋಗ ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಮೇಲಿನ ರಿಯಾಯಿತಿ ಎಂಡಿಎ ಮತ್ತು  ಪ್ರೋತ್ಸಾಹ ಮಂಜೂರಿ ಸಹಾಯಧನಕ್ಕಾಗಿ 105.84 ಕೋಟಿ ರೂ., ತೆಂಗಿನ ನಾರಿನ ವಲಯಕ್ಕೆ ನೆರವು ಕಲ್ಪಿಸಲು ತೆಂಗು ಭಾಗ್ಯ ಯೋಜನೆಯಡಿ 10ಕೋಟಿ ರೂ., ಕರಕುಶಲ ಕಲೆಗೆ ರಿಯಾಯಿತಿ ಸಹಾಯಧನಕ್ಕಾಗಿ 1ಕೋಟಿ ರೂ., ಕ್ಲಿಷ್ಟಕರ ಮೂಲಸೌಕರ್ಯ ಅಭಿವೃದ್ಧಿಗೆ 53.49 ಕೋಟಿ ರೂ., ಅವೇಕ್ ಮುಂದುವರೆದ ಕಾಮಗಾರಿಗಳಿಗಾಗಿ 2 ಕೋಟಿ ರೂ., ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿನ ಕಟ್ಟಡ ಕಾಮಗಾರಿಗಳ ವೆಚ್ಚಕ್ಕಾಗಿ 1.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರ ನೀಡಿದರು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಯೋಜನಾ ಪ್ರಗತಿ ಕುಟಿಂತವಾಗಿದ್ದು, ಮುಂದಿನ ದಿನಗಳಲ್ಲಿ ನಿಗಧಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ಅವರು ಸೂಚನೆ ನೀಡಿದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ (ಎಂಎಸ್‍ಎಂಇ) ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ನಿರ್ದೇಶಕಿ (ಎಂಎಸ್‍ಎಂಇ) ವಿನೋದ್ ಪ್ರಿಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಎಲ್ಲ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News