ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ನಿಯೋಜನೆಗೆ ನಿರ್ಬಂಧ: ಸಚಿವ ಪ್ರಭು ಚೌಹಾಣ್

Update: 2021-07-09 15:41 GMT

ಬೆಂಗಳೂರು, ಜು. 9: `ಪಶು ಸಂಗೋಪನೆ ಇಲಾಖೆಯಿಂದ ಇನ್ನು ಮುಂದೆ ಬೇರೆ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳುವುದನ್ನು ನಿರ್ಬಂಧಿಸಲಾಗುವುದು' ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸ್ಪಷ್ಟಣೆ ನೀಡಿದ್ದಾರೆ.

`ಪಶು ಸಂಗೋಪನೆ ಇಲಾಖೆಯಿಂದ ಸಿಬ್ಬಂದಿ ಮತ್ತು ಅಧಿಕಾರಿಗಳು ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದರೆ ಅಂತಹವರ ಸೇವೆಯನ್ನು ಇದೇ ಜು.31ರ ಒಳಗೆ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಇಲಾಖೆಯಿಂದ ಅಧಿಕಾರಿ ಸಿಬ್ಬಂದಿಗಳ ನಿಯೋಜನೆ ಮೇಲೆ ಕಳುಹಿಸುವುದಿಲ್ಲ' ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.

`ರೈತರ, ಪಶಿಪಾಲಕರ ಅಭಿವೃದ್ಧಿಗಾಗಿ ಇಲಾಖೆಯಿಂದ ರಾಣಿ ಕಲ್ಯಾಣ ಮಂಡಳಿ, ಪಶು ಸಂಜೀವಿನಿ ಯೋಜನೆ, ಜಾನುವಾರು ಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ನಿರ್ಮಾಣ, ಸಹಾಯವಾಣಿಯಂತಹ ಜನಪರ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಹೀಗಾಗಿ ಮಹತ್ವದ ಯೋಜನೆಗಳನ್ನು ಕೈಗೊಳ್ಳಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಆಗದಂತೆ ಕ್ರಮ ವಹಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
`ಜಾನುವಾರು ಲಸಿಕಾ ಕಾರ್ಯಕ್ರಮಗಳ ಪ್ರಗತಿ ಕುಂಠಿತವಾಗಬಾರದೆಂದು ಅನ್ಯ ಕರ್ತವ್ಯದ ಮೇಲೆ ಬೇರೆ ಇಲಾಖೆಗೆ ತೆರಳಿರುವ ಎಲ್ಲ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಹಿಂದಿರುಗಿಸಲು ಆದೇಶಿಸಲಾಗಿದೆ. ಅಧಿವೇಶನ ಸಂದರ್ಭದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಪಶುವೈದ್ಯರ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದರು. ಹಾಗೆಯೇ ಸಿಎಂ ಅವರು ಈ ಕುರಿತು ಪತ್ರದ ಮೂಲಕ ಸೂಚನೆ ನೀಡಿದ್ದರು' ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮನವಿ ಮಾಡಬೇಡಿ: `ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಯಾವುದೇ ಕಾರಣಕ್ಕೂ ಇಲಾಖೆಯಿಂದ ಅನ್ಯ ಕರ್ತವ್ಯದ ಮೇಲೆ ನಿಯೋಜನೆ ಮೇಲೆ ಸಿಬ್ಬಂದಿ ನೀಡಲು ಶಾಸಕರು ಮನವಿ ಸಲ್ಲಿಸಬಾರದು. ರೈತರು, ಪಶುಪಾಲಕರು, ಜಾನುವಾರು ಸಾಕಣೆದಾರರ ಮೇಲೆ ಸಿಬ್ಬಂದಿ ಕೊರತೆ ನೇರವಾಗಿ ಪರಿಣಾಮ ಬೀರುತ್ತದೆ. ಇಲಾಖೆಯಿಂದ ಬೇರೆ ಇಲಾಖೆಗೆ ತೆರಳಿ ಪಶುವೈದ್ಯರು ಕಾರ್ಯನಿರ್ವಹಿಸಬಹುದು. ಆದರೆ, ಬೇರೆ ಇಲಾಖೆಯಿಂದ ಇಲಾಖೆಗೆ ಬಂದು ಅಧಿಕಾರಿಗಳು ಪ್ರಾಣಿಗಳಿಗೆ ಚಿಕಿತ್ಸೆ ನೀಡವಂತಹ ಕೆಲಸಗಳನ್ನು ಮಾಡಲು ಆಗುವುದಿಲ್ಲ'

-ಪ್ರಭು ಚೌಹಾಣ್ ಪಶು ಸಂಗೋಪನಾ ಸಚಿವ

`ಕಲಿಕಾ ಹಂತದಲ್ಲಿ ಆಸಕ್ತಿಯಿಂದ ಪಶುವೈದ್ಯಕೀಯ ಪದವಿ ಪಡೆದು ಮೂಕಪ್ರಾಣಿಗಳ ಆರೋಗ್ಯ ಕಾಪಾಡುವ ಪಣತೊಟ್ಟ ನೀವೆಲ್ಲ ಈಗ ಮೂಕ ಪ್ರಾಣಿಗಳ ರೋದನೆಯನ್ನು ಕಡೆಗಣಿಸಿ ಬೇರೆ ಇಲಾಖೆಗೆ ಅನ್ಯ ಕರ್ತವ್ಯಕ್ಕೆ ತೆರಳಿದ್ದಿರಿ. ನಿಮ್ಮ ಮಾತೃ ಇಲಾಖೆಗೆ ನಿಮ್ಮ ಸೇವೆ ಮುಡಿಪಾಗಿರಲಿ. ಪ್ರಾಣಿಗಳ ರೋದನೆ ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗೆ ಅರ್ಥವಾಗುವುದು ಕಷ್ಟ. ಆದುದರಿಂದ ಎಲ್ಲ ಪಶು ವೈದ್ಯಾಧಿಕಾರಿಗಳು ಇಲಾಖೆಗೆ ಹಿಂತಿರುಗಿ ಪ್ರಾಣಿಗಳ ಆರೋಗ್ಯಕ್ಕೆ ನಿಮ್ಮ ಸೇವೆಯನ್ನು ಮೀಸಲಿಡಿಬೇಕು. ನನ್ನ ಇಲಾಖೆಯನ್ನು ನನ್ನ ಕುಟುಂಬವೆಂದು ಪರಿಗಣಿಸಿದ್ದೇನೆ. ಏನೇ ಸಮಸ್ಯೆ ಇದ್ದರೂ ನೇರವಾಗಿ ಸಂಪರ್ಕಿಸಿ'

-ಪ್ರಭು ಚೌಹಾಣ್ ಪಶು ಸಂಗೋಪನಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News