ಸರಕಾರದ ಅಭಿಪ್ರಾಯ ಕೇಳದೆ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸಿದೆ: ಸಚಿವ ಈಶ್ವರಪ್ಪ

Update: 2021-07-09 17:31 GMT

ಮೈಸೂರು,ಜು.9: ಜಿ.ಪಂ. ಮತ್ತು ತಾ.ಪಂ. ಚುನಾವಣೆ ಮೀಸಲಾತಿ ಸರಿಯಿಲ್ಲ ಎಂದು ಇಡೀ ರಾಜ್ಯದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವುದರಿಂದ ಡಿಸೆಂಬರ್ ತನಕ ಚುನಾವಣೆ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಚುನಾವಣಾ ಆಯೋಗ ಸೌಜನ್ಯಕ್ಕಾದರೂ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳದೆ ಮೀಸಲಾತಿ ಪ್ರಕಟಿಸಿರುವುದು ಎಲ್ಲರ ವಿರೋಧಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಈ ಮೀಸಲಾತಿಯಿಂದ ಎಲ್ಲಾ ಪಕ್ಷದ ಮುಖಂಡರುಗಳು ನನ್ನುನ್ನು ಕೇಳುತ್ತಿದ್ದಾರೆ. ಆದರೆ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸಿರುವುದರಿಂದ ನಾವು ವಿರೋಧ ಮಾಡುತ್ತಿಲ್ಲ. ಮೀಸಲಾತಿ ಪುನರ್ ಪರಿಶೀಲಿಸಿ ಎಂದು ಕೇಳುವುದಿಲ್ಲ, ನಾವು ಚುನಾವಣೆಗೆ ಸಜ್ಜಾಗಿದ್ದೇವೆ. ಆದರೆ ಮೀಸಲಾತಿ ಬಗ್ಗೆ ಎಲ್ಲರೂ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಚುನಾವಣೆಗೆ 6 ತಿಂಗಳ ಮುಂಚಿತವಾಗಿ ಮೀಸಲಾತಿ ಘೋಷಣೆ ಮಾಡಿದೆ. ಇದರಿಂದ ಅಭ್ಯರ್ಥಿಗಳಾಗುವವರು ಮನೆ ಮಠ ಮಾರಿಕೊಳ್ಳಬೇಕಾಗುತ್ತದೆ. ಚುನಾವಣೆ ಹತ್ತಿರದಲ್ಲಿ  ಮೀಸಲಾತಿ ಘೋಷಣೆ ಮಾಡಿದ್ದರೆ ಸರಿಯಾಗಿರುತ್ತಿತ್ತು. ಆದರೆ ಈಗಲೇ ಮೀಸಲಾತಿ ಘೋಷಣೆ ಮಾಡಿರುವುದು ಸರಿಯಲ್ಲ, ಈ ಸಂಬಂಧ ರಾಜ್ಯದ್ಯಾಂತ ವಿವಿಧ ಪಕ್ಷದವರು ಸೇರಿದಂತೆ ಎಲ್ಲರೂ ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ತಕರಾರು ಸಲ್ಲಿಸಲು ಜು.8 ರವರೆಗೆ ಕಾಲಾವಾಕಾಶ ನೀಡಲಾಗಿತ್ತು. ಇದರಲ್ಲಿ ತೃಪ್ತಿ ಇಲ್ಲದವರು ನ್ಯಾಯಲಯದ ಮೊರೆ ಹೋಗಬಹುದು ಎಂದು ಹೇಳಿದರು.

ಕೆಆರ್ ಎಸ್ ಡ್ಯಾಂ ವಿವಾದದ ಬಗ್ಗೆ ಮಾತನಾಡಿದ ಅವರು, ಸುಮಲತಾ ಮತ್ತು ಕುಮಾರಸ್ವಾಮಿ ಅವರು ಬಳಸುತ್ತಿರುವ ಭಾಷೆ ಬಗ್ಗೆ ನನಗೆ ವೈಯಕ್ತಿಕವಾಗಿ ಬೇಸರವಿದೆ ಎಂದು ಹೇಳಿದರು. ಕೆಆರ್ ಎಸ್ ಡ್ಯಾಂ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಮುಂದುವರಿಸುವುದು ಬೇಡ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News