ಕೆಆರ್ ಎಸ್ ಅಣೆಕಟ್ಟೆ ಬಿರುಕು ಬಿಟ್ಟಿಲ್ಲ: ನೀರಾವರಿ ನಿಗಮ ಸ್ಪಷ್ಟನೆ

Update: 2021-07-09 17:44 GMT

ಬೆಂಗಳೂರು, ಜು .9: `ಕೃಷ್ಣರಾಜ ಸಾಗರ(ಕೆಆರ್ ಎಸ್) ಜಲಾಶಯ ಬಿರುಕು ವಿಚಾರ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವಾಗಲೇ ಕೆಆರ್ ಎಸ್ ಅಣೆಕಟ್ಟೆ ಯಾವುದೇ ಬಿರುಕು ಬಿಟ್ಟಿಲ್ಲ. ಈ ಸಂಬಂಧದ ವರದಿಗಳು ಸತ್ಯಕ್ಕ ದೂರಾವಾದವು' ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶನ ಕೆ.ಜೆ.ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.

`ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಸಮಿತಿ ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ಅಣೆಕಟ್ಟೆಯನ್ನು ನಿಯಮಿತ ಅವಧಿಯಲ್ಲಿ ಪರೀಕ್ಷಿಸಿ ವರದಿಯನ್ನು ಅಣೆಕಟ್ಟು ಭದ್ರತಾ ವಿಭಾಗ ಕೆಆರ್ ಎಸ್ ಅವರಿಗೆ ಸಲ್ಲಿಸಿದ್ದು, ಅಣೆಕಟ್ಟೆಯಲ್ಲಿ ಯಾವುದೇ ಬಿರುಕುಗಳು ಇಲ್ಲದಿರುವುದು ಖಚಿತವಾಗಿದೆ. ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಸಮಿತಿ ಸದಸ್ಯರು ನೀಡಿರುವ ಸಲಹೆಗಳ ಆಧಾರದ ಮೇಲೆ ಅಣೆಕಟ್ಟೆಯ ಬಲವನ್ನು ವೃದ್ಧಿಸಲು ಅವಶ್ಯವಿರುವ ಕಾಮಗಾರಿಗಳನ್ನು ಅಣೆಕಟ್ಟೆ ಸುಧಾರಣಾ ಕಾರ್ಯಕ್ರಮದಡಿ ಕೈಗೆತ್ತಿಕೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.

`ಕೆಆರ್ ಎಸ್ ಅಣೆಕಟ್ಟೆಯಲ್ಲಿ ಯಾವುದೇ ಬಿರುಕುಗಳಿರುವುದಿಲ್ಲ. ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗೆ ವಿಶ್ವಬ್ಯಾಂಕ್ ಮತ್ತು ಕೇಂದ್ರ ಜ ಆಯೋಗದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯು ದೊರಕಿರುತ್ತದೆ. ಜು.2ರಂದು ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಹಾಗೂ ಡ್ರಿಪ್ ಕನ್ಸಲ್ಟೆಂಟ್ ಅವರು ಅಣೆಕಟ್ಟೆಯ 136 ಗೇಟ್‍ಗಳ ಬದಲಾವಣೆ ಕಾಮಗಾರಿಯ ಸ್ಥಳ ಪರಿವೀಕ್ಷಣೆ ನಡೆಸುತ್ತಿರುತ್ತಾರೆ ಹಾಗೂ ಅಣೆಕಟ್ಟೆಯಲ್ಲಿ ಯಾವುದೇ ತರಹದ ಬಿರುಕುಗಳು ಇಲ್ಲವೆಂದು ತಿಳಿಸಿರುತ್ತಾರೆ' ಎಂದು ಪ್ರಕಾಶ್ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News