ನಾನು ಬೇರೆಯವರ ಜಗಳದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ: ಕೆಆರ್ ಎಸ್ ವಿವಾದದ ಬಗ್ಗೆ ಡಿ.ಕೆ.ಶಿವಕುಮಾರ್

Update: 2021-07-09 18:02 GMT

ಬೆಂಗಳೂರು, ಜು. 9: `ನಾನು ಬೇರೆಯವರ ಜಗಳದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರಕ್ಕೆ ಮೇಕೆದಾಟು ಯೋಜನೆ ಆದ್ಯತೆ ಆಗಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಯಾರ ಜಗಳದಲ್ಲೂ ಮಧ್ಯಪ್ರವೇಶಿಸುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ನಾನು ಸರಕಾರಕ್ಕೆ ಆಗ್ರಹಿಸುವುದೇನೆಂದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಆದ್ಯತೆ ಮೇರೆಗೆ ಬೆಂಗಳೂರಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಮೇಕೆದಾಟು ಯೋಜನೆ ಕೆಲಸ ಮಾಡಬೇಕು' ಎಂದು ಆಗ್ರಹಪಡಿಸಿದರು.

`ಕೆಆರ್ ಎಸ್ ಬಿರುಕು ವಿಚಾರ ನೋಡಿಕೊಳ್ಳಲು ಸರಕಾರ, ಈ ಸಚಿವಾಲಯ ಇಟ್ಟುಕೊಂಡಿರುವ ಮುಖ್ಯಮಂತ್ರಿ, ತಂತ್ರಜ್ಞರ ತಂಡ ಇದೆ. ಅವರು ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿ ಹೇಳಬೇಕು. ಬಿರುಕು ಬಿಟ್ಟಿದೆ ಎಂದು ಹೇಳಿ ಜನರಲ್ಲಿ ಆತಂಕ ಮೂಡಿಸುವುದು ನಮ್ಮ ಕೆಲಸವಲ್ಲ. ವಿರೋಧ ಪಕ್ಷವಾಗಿ ನಮ್ಮ ಕೆಲಸ, ಸರಕಾರಕ್ಕೆ ಸಲಹೆ ನೀಡುವುದು ಅಥವಾ ಅವರು ಕೆಲಸ ಮಾಡದಿದ್ದಾಗ ಟೀಕೆ ಮಾಡುವುದು, ಕೆಲಸ ಮಾಡಿಸುವುದು. ರೈತರು, ಜನರಲ್ಲಿ ಭಯ ಹುಟ್ಟಿಸುವ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ಭಾಗಿಯಾಗುವುದಿಲ್ಲ.

ನಮ್ಮ ಆದ್ಯತೆಯಲ್ಲದ ವಿಚಾರವಾಗಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನಮ್ಮ ಬಗ್ಗೆ ಏನೇ ಹೇಳಿದರೂ ನಾವು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಜಗಳ ಮಾಡಿಕೊಂಡರೆ ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ?' ಎಂದು ಹೇಳಿದರು.
`ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಒಂದು ಮಾಧ್ಯಮದಲ್ಲಿ ವರದಿ ನೋಡಿದೆ. ಈ ವಿಚಾರ ಏನು ಎಂದು ತಿಳಿದುಕೊಂಡು ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ' ಎಂದು ಶಿವಕುಮಾರ್ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News