ಕಾಂಗ್ರೆಸ್ ಸೈನಿಕರ ಪರವೋ ಅಥವಾ ಪಾಕಿಸ್ಥಾನದ ಪರವೋ ಸ್ಪಷ್ಟ ಪಡಿಸಬೇಕು: ಬಿಜೆಪಿ

Update: 2021-07-09 18:04 GMT

ಬೆಂಗಳೂರು, ಜು. 9: `ಕಾಂಗ್ರೆಸ್ ಪಕ್ಷ ಭಾರತೀಯ ಸೈನಿಕರ ಪರವೋ ಅಥವಾ ಪಾಕಿಸ್ಥಾನದ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು. ದೇಶದ ಸೈನಿಕರ ಸಾವು ಬಯಸುವ ಕಾರ್ಯಕರ್ತರನ್ನೂ ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತದೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ' ಎಂದು ಬಿಜೆಪಿ ಟೀಕಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಈ ಹಿಂದೆ ಗೋ ಕಳ್ಳರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು ಈಗ ಪಾಕಿಸ್ಥಾನ ಪ್ರೇಮಿಯ ಪರ ನಿಂತಿದ್ದಾರೆ. ಕಾಂಗ್ರೆಸ್ ನಾಯಕರ ಒಲವು, ನಿಲುವುಗಳೆಲ್ಲ ದೇಶದ ವಿರುದ್ಧವಾಗಿರುವವರ ಪರವಾಗಿರುತ್ತದೆ. ಸೈನಿಕರ ಸಾವು ಬಯಸುವ ವ್ಯಕ್ತಿಯನ್ನು ಅಮಾಯಕ ಎಂದು ಬಿಂಬಿಸುವ ಏಕೈಕ ಪಕ್ಷವೊಂದಿದ್ದರೆ, ಅದು ಕಾಂಗ್ರೆಸ್ ಮಾತ್ರ!' ಎಂದು ವಾಗ್ದಾಳಿ ನಡೆಸಿದೆ.

`ಸಿದ್ದರಾಮಯ್ಯ ಅವರ ಪಾಕಿಸ್ಥಾನ ಪ್ರೇಮ ಈ ಹಿಂದೆಯೇ ಪ್ರಕಟವಾಗಿತ್ತು. ಪಾಕಿಸ್ಥಾನವನ್ನು ಪ್ರೇಮಿಸುವ ಸಮಾಜಘಾತುಕ ಸಂಘಟನೆಗಳ ಕೇಸ್ ಹಿಂಪಡೆದಿದ್ದರು. ಈಗ ಶತ್ರುರಾಷ್ಟ್ರ ಪಾಕಿಸ್ಥಾನದ ಪರವಾಗಿ ಬರೆದ ವ್ಯಕ್ತಿಯ ವಿರುದ್ಧ ಸಿದ್ದರಾಮಯ್ಯ ಆದಿಯಾಗಿ 
ಕಾಂಗ್ರೆಸ್ ಪಕ್ಷದ ನಾಯಕರು ತೋರ್ಪಡಿಸುತ್ತಿರುವ ಕಾಳಜಿ ದೇಶದ ಹಿತಾಸಕ್ತಿಗೆ ಮಾರಕವಾದದ್ದು' ಎಂದು ಬಿಜೆಪಿ ಲೇವಡಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News