ಹೆಗಲ ಮೇಲೆ ಕೈಯಿಟ್ಟ ಕಾರ್ಯಕರ್ತನ ತಲೆಗೆ ಬಾರಿಸಿದ ಡಿಕೆಶಿ!
ಮಂಡ್ಯ, ಜು.10: ಹೆಗಲ ಮೇಲೆ ಕೈ ಇಟ್ಟನೆಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಲೆಗೆ ಬಾರಿಸಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಕೆಶಿ ಅವರು ಮಾಜಿ ಸಂಸದ, ಹಿರಿಯ ರೈತ ಹೋರಾಟಗಾರ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಭಾರತೀ ನಗರಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಡಿಕೆಶಿ ಒಂದಿಷ್ಟು ಬೆಂಬಲಿಗರು, ಮುಖಂಡರೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರ್ಯಕರ್ತ ಅವರ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಡಿಕೆಶಿ ಅವರ ತಲೆಗೆ ಬಾರಿಸಿದ್ದಲ್ಲದೆ, 'ನಿನಗೆ ಸಾಮಾನ್ಯ ಜ್ಞಾನ ಇಲ್ಲವೇ, ವಿಡಿಯೊ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹೆಗಲ ಮೇಲೆ ಕೈ ಇಡುತ್ತೀಯಾ' ಎಂದು ಗದರಿದ್ದಾರೆ. ತಕ್ಷಣ ಆ ಕಾರ್ಯಕರ್ತ ಹಿಂದೆ ಸರಿದಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ.
ಬಿಜೆಪಿ ಖಂಡನೆ: ಘಟನೆಯನ್ನು ಖಂಡಿಸಿರುವ ರಾಜ್ಯ ಬಿಜೆಪಿ, ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಮಾಧ್ಯಮಗಳ ಎದುರು ವ್ಯಕ್ತಿಗೆ ಹಲ್ಲೆ ನಡೆಸಿರುವುದು ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿ ಅವರೇ ನೀವು ರಾಜಕಾರಣಿಯೋ, ರೌಡಿಯೋ' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ.