ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ: ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ

Update: 2021-07-10 12:19 GMT

ಬೆಂಗಳೂರು, ಜು. 10: `ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ವರ್ತನೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು. ಆದರೆ, ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ. ರಾಜ್ಯಾಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ, ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ' ಎಂದು ಬಿಜೆಪಿ ಇಂದಿಲ್ಲಿ ಸಲಹೆ ನೀಡಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ದರ್ಪದ ವರ್ತನೆ ಹಲವು ಬಾರಿ ಸಾಬೀತುಗೊಂಡಿದೆ. ವ್ಯಕ್ತಿಯೊಬ್ಬರು ಕರೆ ಮಾಡಿ ವಿದ್ಯುತ್ ಸಮಸ್ಯೆ ಹೇಳಿಕೊಂಡಾಗ ಅವರ ಮೇಲೆ ರೇಗಾಡಿ, ಮಧ್ಯ ರಾತ್ರಿಯಲ್ಲಿ ಮನೆಯ ಹೆಂಚು ತೆಗೆದು ಮನೆಯೊಳಗೆ ಇಳಿದು ಬಂಧಿಸುವಷ್ಟರ ಮಟ್ಟಿಗೆ ಅಧಿಕಾರಿಗಳಿಗೆ ಡಿಕೆಶಿ ಒತ್ತಡ ಹೇರಿದ್ದರು' ಎಂದು ಟೀಕಿಸಿದೆ.

'ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲು ಅರಿತುಕೊಳ್ಳಬೇಕು. ಈ ಹಿಂದೆ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಮಹಾನಾಯಕ ಡಿಕೆಶಿಯವರೇ ಭೂಗತ ಜಗತ್ತಿನ ರೀತಿಯ ವರ್ತನೆಗಳು ನಿಮಗೆ ಅನಿವಾರ್ಯ ಎಂದಾದರೆ ಸಾರ್ವಜನಿಕ ಜೀವನ ಬಿಟ್ಟುಬಿಡಿ' ಎಂದು ಬಿಜೆಪಿ ಸಲಹೆ ನೀಡಿದೆ.

'ಕೆಪಿಸಿಸಿ ಅಧ್ಯಕ್ಷರ ಹದ್ದು ಮೀರಿದ ವರ್ತನೆಗಳು ಇತ್ತೀಚೆಗೆ ಮಿತಿ ಮೀರುತ್ತಿದೆ. `ನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ' ಎಂದು ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಗದರಿಸಿದ್ದರು. ಸಾರ್ವಜನಿಕವಾಗಿ ಹೊಡೆಯುವುದು, ಒದೆಯೋದು, ಕಾರ್ಯಕರ್ತರ ಮೊಬೈಲನ್ನು ಕಿತ್ತೆಸೆಯುವುದು ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು?' ಎಂದು ಬಿಜೆಪಿ ಪ್ರಶ್ನಿಸಿದೆ.

'ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿ.ಕೆ.ಶಿವಕುಮಾರ್ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಶಿವಕುಮಾರ್ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!?' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ

-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News