×
Ad

ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ನಿಲ್ಲದು: ಸಂಸದೆ ಸುಮಲತಾ ಅಂಬರೀಶ್

Update: 2021-07-10 18:03 IST

ಬೆಂಗಳೂರು, ಜು. 10: `ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ನಿಲ್ಲದು. ನಾನು ಒಬ್ಬ ಸಂಸದೆಯಾಗಿ ನನ್ನ ಜವಾಬ್ದಾರಿಯ ಬಗ್ಗೆ ನನಗೆ ಗೊತ್ತಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಅವರ ಭೇಟಿಗೂ ಸಮಯ ಕೇಳಿದ್ದೇನೆ' ಎಂದು ಮಂಡ್ಯ ಸಂಸದೆ ಸುಮಲತಾ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಟಿ.ಎ.ಶರವಣ ಯಾರು ಎಂಬುದೇ ನನಗೆ ಗೊತ್ತಿಲ್ಲ. ಹೀಗಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಕೆಆರ್‌ಎಸ್ ಗೆ ಭೇಟಿ ನೀಡಲು ಈವರೆಗೆ ಅನುಮತಿ ಇರಲಿಲ್ಲ. ಕಾವೇರಿ ನಿಗಮದ ಅನುಮತಿ ಪಡೆದು ಹೋಗುತ್ತೇನೆ. ಕೆಆರ್‍ಎಸ್ ಜಲಾಶಯ ಪರಿಶೀಲನೆ ಮಾಡಲು ಹೋಗುತ್ತೇನೆ. ಹಾಗೆಯೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ಪರಿಶೀಲಿಸುವೆ' ಎಂದು ಹೇಳಿದರು.

ಸತ್ಯದ ಪರ ನಿಂತಾಗ ಶತ್ರುಗಳು ತಾನಾಗೇ ಹುಟ್ಟಿಕೊಳ್ಳುತ್ತಾರೆ. ವಿರೋಧಿಗಳಿಗೆ, ವಿರೋಧಾಭಿಪ್ರಾಯಗಳ ವಿರುದ್ಧ ಸೆಟೆದು ನಿಂತಿದ್ದಾರೆ. ಅಧಿಕಾರಿಗಳು ಕೊಡುವುದು ಕೇವಲ ವರದಿ ಅಷ್ಟೇ. ಆದರೆ, ನಮಗೆ ಬೇಕಾಗಿರುವುದು ದೃಢೀಕರಣ(ಸರ್ಟಿಫಿಕೆಟ್). ಕೆಆರ್‍ಎಸ್ ಬಿರುಕು ಬಿಟ್ಟಿಲ್ಲ ಎನ್ನುವುದಾದರೆ ಸಂತಸವೇ ಆಗುತ್ತದೆ. ಆ ಬಗ್ಗೆ ಮೊದಲು ಸಂತಸಪಡುವುದು ನಾನೇ' ಎಂದು ಸುಮಲತಾ ಹೇಳಿದರು.

ಜು.19ರಿಂದ ಆಗಸ್ಟ್ 13ರ ವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಹಾಗಾಗಿ ನಾನು ಹೋಗಬೇಕಿದೆ. ಆಗ ಮಂಡ್ಯ ಸಂಸದರು ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ. ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆಂದೂ ಗೊತ್ತಿದೆ ಎಂದ ಅವರು, ಕೆಆರ್‌ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಸ್ಫೋಟ ನಡೆಯುತ್ತಿದೆ ಎಂಬುದನ್ನು ತೋರಿಸಿದೆ. ನಾವು ಅಂದುಕೊಂಡಿದ್ದು ಒಂದು ಎರಡು ಬಾರಿ ಭೂಮಿ ಕಂಪನ ಆಗಿರಬೇಕು ಎಂದು. ಆದರೆ, ಹನ್ನೊಂದು ಬಾರಿ ಭೂಮಿ ಕಂಪನ ಆಗಿದೆ ಎಂದು ಉಲ್ಲೇಖಿಸಿದರು.

`ಹೀಗಾಗಿ ಅಧಿಕಾರಿಗಳು ಹೇಳುವುದನ್ನೆ ಅಂತಿಮ ಎಂದು ಹೇಳಲು ಆಗುವುದಿಲ್ಲ. ಸರ್ಟಿಫಿಕೇಟ್ ಕೊಡುವುದು ಅಧಿಕಾರಿಗಳ ಕೆಲಸ ಅಲ್ಲ. ನಮಗೆ ಸರ್ಟಿಫಿಕೇಟ್ ಬೇಕು. ಅದಕ್ಕಾಗಿ ನಾವು ಕಾಯಬೇಕು. ಕೆಆರ್‌ಎಸ್ ಗೆ ಯಾವುದೇ ರೀತಿಯ ಅನಾಹುತ ಆಗೋಕೆ ನಾನು ಬಿಡುವುದಿಲ್ಲ. ಅದು ಆಗದೇ ಇರೋ ರೀತಿ ನಾನು ಹೋರಾಟ ಮಾಡುತ್ತೇನೆ. ಇದರಿಂದ ಯಾರಿಗೆ ನಷ್ಟ ಆಗುತ್ತೆ ಅನ್ನುವುದು ನನ್ನ ವಿಚಾರವಲ್ಲ' ಎಂದು ಅವರು ನುಡಿದರು.

ಸತ್ಯದ ಪರವಾಗಿ ನಿಂತಾಗ ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ!’

-ಸುಮಲತಾ (ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News