ರಾಜೀನಾಮೆ ಕೊಡುವ ವಿಚಾರ ಕೈಬಿಟ್ಟಿದ್ದೇನೆ: ರಮೇಶ್ ಜಾರಕಿಹೊಳಿ ಸ್ಪಷ್ಟನೆ

Update: 2021-07-10 13:16 GMT

ಬೆಳಗಾವಿ, ಜು. 10: `ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಹೇಳಿದ್ದ ಜಿಲ್ಲೆಯ ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, `ರಾಜೀನಾಮೆ ನೀಡುವ ವಿಚಾರ ಇದೀಗ ಮುಗಿದ ಅಧ್ಯಾಯ' ಎಂದು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, `ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ. ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆ ಕೊಡುವ ವಿಚಾರ ಕೈಬಿಟ್ಟಿದ್ದೇನೆ' ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

ಕೆಆರ್‍ಎಸ್ ಅಣೆಕಟ್ಟಿನಲ್ಲಿ ಬಿರುಕಿನ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನು ಮಾತನಾಡಿದ್ದಾರೆಂದು ನನಗೆ ಹೆಚ್ಚು ಮಾಹಿತಿ ಇಲ್ಲ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಣೆಕಟ್ಟಿನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಂಡಿ ಹೇಳುವುದು ಅಂತಿಮ. ಸುಮಲತಾ ಏಕೆ ಹೀಗೆ ಹೇಳಿದರು ಎಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬೆಂಗಳೂರು, ಮುಂಬೈಗೆ ಹೋಗಿದ್ದೆ. ಜಂಟಿ ಸುದ್ದಿಗೋಷ್ಟಿ ಮಾಡುವ ಸಂದರ್ಭ ಬಂದಿಲ್ಲ. ಬಾಲಚಂದ್ರ ಜಾರಕಿಹೊಳಿ ಜೊತೆಗೆ ಈ ಬಗ್ಗೆ ಮಾತನಾಡುತ್ತೇನೆ. ನಾನು ಒಂಟಿ ಆಗುವ ಪ್ರಶ್ನೆಯೇ ಇಲ್ಲ. ಇನ್ನು ಮಿತ್ರ ಮಂಡಳಿ ಸದಸ್ಯರನ್ನು ನಾನು ಭೇಟಿಯಾಗಿಲ್ಲ ಎಂದು ಜಾರಕಿಹೊಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News