ಕೊರೋನ ಸೋಂಕು ಹಾವಳಿ: ಶೇ.51ರಷ್ಟು ಕುಸಿತ ಕಂಡ ಕೌಶಲ್ಯ ತರಬೇತಿ

Update: 2021-07-10 13:44 GMT

ಬೆಂಗಳೂರು. ಜು.10: ರಾಜ್ಯದಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ನಂತರ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡಿಕೆ ಶೇ.51ಕ್ಕೆ ಕುಸಿದಿದೆ ಎನ್ನುವ ಸಂಗತಿ ಬಯಲಾಗಿದೆ.

2019-20ರ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾವಾರು ಅರ್ಧಕ್ಕಿಂತಲೂ ಹೆಚ್ಚಿನ ತರಬೇತಿ ಕಾರ್ಯಕ್ರಮ ಕಡಿಮೆಯಾಗಿದೆ. ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಸರಕಾರದ ಅಧೀನದಲ್ಲಿ ಬರುವ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ನಡೆಸುತ್ತಿದೆ. ಕೊರೋನ ಸೋಂಕು ತರಬೇತಿಯ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರೀ ತರಬೇತಿಗೆ ಅಷ್ಟೇ ಅಲ್ಲ ತರಬೇತಿ ಮುಗಿಸಿದ ಅಭ್ಯರ್ಥಿಗಳ ಕೆಲಸದ ನೇಮಕ ಮಾಡುವ ವಿಷಯಕ್ಕೂ ಹಿನ್ನಡೆಯಾಗಿದೆ. 2019-20ರಲ್ಲಿ ಕೌಶಲ್ಯ ತರಬೇತಿಯಡಿ ತರಬೇತಿ ಪಡೆದಿದ್ದ 46,146 ಮಂದಿಗೆ ವಿವಿಧ ಉದ್ಯೋಗ ಆಧಾರಿತ ಕೆಲಸಗಳಲ್ಲಿ ತರಬೇತಿ ನೀಡಲಾಗಿತ್ತು. 2020-21ರಲ್ಲಿ ಈ ಪ್ರಮಾಣ 23,845ಕ್ಕೆ ಕುಸಿದಿದೆ ಅಂದರೆ ಶೇ.51ರಷ್ಟು ಕಡಿಮೆಯಾಗಿದೆ.

ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗ ಆಧಾರಿತ ಕೆಲಸಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಡಾಟಾ ಎಂಟ್ರಿ ಆಪರೇಟರ್, ಬ್ಯೂಟಿ ಥೆರಪಿಸ್ಟ್, ಫೀಲ್ಡ್ ಟೆಕ್ನಿಷಿಯನ್, ಟೈಲರ್‍ಗಳು, ರೀಟೈಲ್ ಹೀಗೆ ವಿವಿಧ ಉದ್ಯೋಗ ಆಧಾರಿತ ಕೆಲಸಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಕೌಶಲ್ಯ ತರಬೇತಿ ಸಂಸ್ಥೆಗಳು ತರಬೇತಿ ನೀಡುವ ಕೆಲಸ ಆರಂಭಿಸಿದ್ದವು ಜನವರಿ 2021ರ ವೇಳೆಗೆ ಎಲ್ಲವು ಸುಗಮವಾಗಿ ನಡೆಯುತ್ತಿದೆ ಎನ್ನುವಾಗ ಮತ್ತೊಮ್ಮೆ ಮಾರ್ಚ್, ಎಪ್ರಿಲ್‍ನಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ನೀಡುವ ಸಂಖ್ಯೆ ಕಡಿಮೆಯಾಗಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಹೇಳಿದ್ದಾರೆ.

2021-22ರಲ್ಲಿ 34 ಸಾವಿರ ಮಂದಿಗೆ ವಿವಿಧ ಉದ್ಯೋಗ ಆಧಾರಿತ ಕೆಲಸಗಳಲ್ಲಿ ತರಬೇತಿ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News