×
Ad

ಮಂಡ್ಯ ರಾಜಕೀಯಕ್ಕೆ ನಾನು ಬರುತ್ತೇನೆ ಎಂಬ ಭಯವೇಕೆ: ರಾಕ್‍ಲೈನ್ ವೆಂಕಟೇಶ್

Update: 2021-07-10 23:42 IST

ಬೆಂಗಳೂರು, ಜು.10: ನಾನು ಯಾರ ಮನಸ್ಸು ನೋಯಿಸುವ ಉದ್ದೇಶ ಹೊಂದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೋವಾಗುವ ರೀತಿ ರಾಜಕೀಯವಾಗಿ ನಾನು ಮಾತನಾಡಿಲ್ಲ ಎಂದು ಸಿನೆಮಾ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ. ಸುಮಲತಾ ವಿರುದ್ಧ ಮಾತನಾಡಿದರೂ ಸುಮ್ಮನಿದ್ದೆ. ಆದರೆ, ಒಂದು ಹೆಣ್ಣು ಎಂದೂ ನೋಡದೆ ಮಾತನಾಡುತ್ತಿದ್ದಾರೆ ಎಂದರು.

ಸುಮಲತಾ ಎಷ್ಟೋ ಸಾರಿ ನೊಂದು ಕಣ್ಣೀರು ಹಾಕಿದ್ದಾರೆ. ಇಷ್ಟೆಲ್ಲಾ ಆದರೂ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಅಂಬಿ ಸ್ಮಾರಕ ಬಗ್ಗೆ ಮಾತನಾಡಿದ್ದಕ್ಕೆ ಉತ್ತರ ಕೊಟ್ಟೆ ಎಂದ ಅವರು, ಕುಮಾರಸ್ವಾಮಿ ಮನಸ್ಸು ಮಾಡಿದರೆ 100 ಸಿನಿಮಾ ಮಾಡುತ್ತಾರೆ. ನಾನು ಮನಸ್ಸು ಮಾಡಿದರೆ ಈಗಲೂ ಶಾಸಕ, ಸಂಸದನಾಗುತ್ತೇನೆ ಎಂದು ಹೇಳಿದರು.

ನನಗೂ ವಾಕ್ ಸ್ವಾತಂತ್ರ್ಯ ಇದೆ. ಅಂಬರೀಶ್ ಜೊತೆ ನನಗೆ ಒಳ್ಳೆಯ ಬಾಂಧವ್ಯ ಇದೆ. ಜೊತೆಗೆ ಅವರ ಕುಟುಂಬಕ್ಕೆ ನಾನು ಬೆನ್ನೆಲುಬಾಗಿ ನಿಂತಿದ್ದೇನೆ. ಅಂಬರೀಶ್ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವದಿಂದ ಬೆಂಬಲಿಸಿದ್ದೇನೆ ಎಂದು ನುಡಿದರು,

ಮಂಡ್ಯ ರಾಜಕೀಯಕ್ಕೆ ನಾನ್ಯಾಕೆ ಹೋಗಲಿ. ನಾನು ಈಗಲೂ ಬಂದಿಲ್ಲ, ಮುಂದೇನು ಬರಲ್ಲ. ರಾಜ್ಯ ರಾಜಕಾರಣಕ್ಕೆ ನಾನು ಬರುವುದೇ ಇಲ್ಲ. ಮಂಡ್ಯ ರಾಜಕೀಯಕ್ಕೆ ನಾನು ಬರುತ್ತೇನೆ ಎಂಬ ಭಯವೇಕೆ ನಿಮಗೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News