ಭಾರತದ ಜನಸಂಖ್ಯೆ ಜನಸಂಪನ್ಮೂಲವಾಗಲಿ

Update: 2021-07-12 06:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎರಡಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದವರಿಗೆ ಸರಕಾರಿ ಸವಲತ್ತುಗಳನ್ನು ನಿರಾಕರಿಸುವ ಮಸೂದೆಯೊಂದನ್ನು ಜಾರಿಗೆ ತರಲು ಉತ್ತರ ಪ್ರದೇಶ ಸರಕಾರ ಯೋಜನೆ ಹಾಕಿದೆ. ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಸಂಪೂರ್ಣ ವಿಫಲವಾಗಿರುವ ಆದಿತ್ಯನಾಥ್ ನೇತೃತ್ವದ ಸರಕಾರ, ಇದೀಗ ಮುಂದಿನ ಚುನಾವಣೆಯನ್ನು ಎದುರಿಸುವ ಪ್ರಯತ್ನದ ಭಾಗವಾಗಿ ಬೇರೆ ಬೇರೆ ತಂತ್ರಗಳನ್ನು ಹೆಣೆಯುತ್ತಿದೆ. ಉತ್ತರ ಪ್ರದೇಶ ಕೊರೋನದಿಂದ ಮತ್ತು ಲಾಕ್‌ಡೌನ್‌ಗಳಿಂದಾಗಿ ದಿಕ್ಕೆಟ್ಟು ಮಲಗಿದೆ. ಹೆಚ್ಚಿದ ಕ್ರಿಮಿನಲ್ ಚಟುವಟಿಕೆಗಳಿಂದಾಗಿ ‘ಜಂಗಲ್ ರಾಜ್’ ಎಂದು ಗುರುತಿಸಲ್ಪಡುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಕೂಡ ಕುಲಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಭಾವಾನಾತ್ಮಕ ವಿಷಯಗಳನ್ನು ಮುಂದಿಟ್ಟೇ ಚುನಾವಣೆಯನ್ನು ಎದುರಿಸಬೇಕಾದ ಅನಿವಾರ್ಯತೆಗೆ ಬಿಜೆಪಿ ಮತ್ತೆ ತಲುಪಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಅಲ್ಲಲ್ಲಿ ಕೋಮುಗಲಭೆಗಳು ನಡೆಯುತ್ತಿರುವುದು ಚುನಾವಣೆಯ ಪೂರ್ವ ತಯಾರಿಯ ಭಾಗವೇ ಆಗಿದೆ. ‘ಮುಸ್ಲಿಮರಿಂದಾಗಿ ಜನಸಂಖ್ಯೆ ಹೆಚ್ಚುತ್ತಿದೆ’ ಎನ್ನುವ ಪೂರ್ವಾಗ್ರಹ ಪೀಡಿತ ಚಿಂತನೆಗಳ ಆಧಾರದಲ್ಲಿ ಜನಸಂಖ್ಯಾನಿಯಂತ್ರಣ ಮಸೂದೆಗೆ ಸರಕಾರ ಅಡಿಯಿಟ್ಟಿದೆ. ಈ ಹಿಂದೆ ಅಸ್ಸಾಮಿನಲ್ಲಿ, ಬಾಂಗ್ಲಾ ವಲಸಿಗರನ್ನು ಒದ್ದೋಡಿಸಲು ಎನ್‌ಆರ್‌ಸಿ ಜಾರಿಗೊಳಿಸಿ ಅಂತಿಮವಾಗಿ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳೂ ಪೌರತ್ವ ಕಳೆದುಕೊಂಡಾಗ ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿತ್ತು.

ಜನಸಂಖ್ಯೆಯ ಕುರಿತಂತೆ ಬಿಜೆಪಿಯ ‘ರಾಜಕೀಯ’ವು ಮುಂದಿನ ದಿನಗಳಲ್ಲಿ ತಿರುಗುಬಾಣವಾಗುವುದರಲ್ಲಿ ಸಂಶಯವಿಲ್ಲ. ಈ ದೇಶದ ಇಂದಿನ ಸ್ಥಿತಿಗೆ ಜನಸಂಖ್ಯೆ ಕಾರಣವೇ? ಈ ಪ್ರಶ್ನೆಗೆ ನಾವು ಮೊದಲು ಉತ್ತರ ಕಂಡುಕೊಳ್ಳಬೇಕಾಗಿದೆ. ಭಾರತದಂತಹ ಅತಿ ದೊಡ್ಡ ಭೂಪ್ರದೇಶಕ್ಕೆ, ಅತಿ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳನ್ನು, ನದಿ, ಸಾಗರಗಳನ್ನು ಹೊಂದಿರುವ ದೇಶಕ್ಕೆ ಈ ಜನಸಂಖ್ಯೆ ಖಂಡಿತ ಹೊರೆಯಾಗಲಾರದು. ಈ ಜನಸಂಖ್ಯೆಯನ್ನು ಜನ ಸಂಪನ್ಮೂಲವಾಗಿ ಪರಿವರ್ತಿಸುವ ಹೊಣೆಗಾರಿಕೆಯನ್ನು ಸರಕಾರ ನಿಭಾಯಿಸಿಲ್ಲ. ವಿಪರ್ಯಾಸವೆಂದರೆ ಕಳೆದ ಏಳು ವರ್ಷಗ ಸರಕಾರದ ವೈಫಲ್ಯಗಳನ್ನು ಕೂಡ ‘ಜನಸಂಖ್ಯೆ’ಯ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಡತನ, ಅಪೌಷ್ಟಿಕತೆ, ಅನಾರೋಗ್ಯ ಎಲ್ಲವುಗಳಿಗೂ ಜನಸಂಖ್ಯೆ ಸ್ಫೋಟ ಕಾರಣ ಎಂದು ನಂಬಿಸಲು ಹೊರಟಿದೆ. ಉತ್ತರ ಪ್ರದೇಶ ಬಿಡುಗಡೆ ಮಾಡಿರುವ ಜನಸಂಖ್ಯಾ ನೀತಿ ಆ ನಿಟ್ಟಿನಲ್ಲಿ ಒಂದು ಪ್ರಯೋಗವಾಗಿದೆ. ದೇಶದಲ್ಲಿ ಸಂಪನ್ಮೂಲಗಳ ಅಸಮಾನ ಹಂಚಿಕೆಯೇ ಭಾರತದಲ್ಲಿ ಜನಸಂಖ್ಯೆ ಸಮಸ್ಯೆಯಾಗುವುದಕ್ಕೆ ಮುಖ್ಯ ಕಾರಣ. ಕಳೆದ ಏಳು ವರ್ಷಗಳಲ್ಲಿ ಈ ಅಸಮಾನತೆ ಇನ್ನಷ್ಟು ಹೆಚ್ಚಿದೆ. ಮೋದಿ ನೇತೃತ್ವದ ಸರಕಾರ ತಂದ ಎಲ್ಲ ನೀತಿಗಳು ಅಂಬಾನಿ, ಅದಾನಿಗಳನ್ನು ವಿಶ್ವದಲ್ಲೇ ಶ್ರೀಮಂತರನ್ನಾಗಿ ಮಾಡಿತು. ಅದೇ ಸಂದರ್ಭದಲ್ಲಿ ದೇಶದ ಜನಸಾಮಾನ್ಯರನ್ನು ಇನ್ನಷ್ಟು ಬಡತನಕ್ಕೆ ತಳ್ಳಿತು. ಈ ಹಿಂದೆ ನೂರು ಜನರು ಉಣ್ಣುವ ಅನ್ನ ಅಂಬಾನಿಯೊಬ್ಬರ ತಟ್ಟೆಯಲ್ಲಿದ್ದರೆ, ಇತ್ತೀಚಿನ ದಿನಗಳಲ್ಲಿ ಇನ್ನೂರು ಜನರು ಉಣ್ಣುವ ಅನ್ನ ಅಲ್ಲಿ ಶೇಖರಣೆಯಾಗಿದೆ. ಪರಿಣಾಮವಾಗಿ ಉಳಿದ 200 ಜನರೂ ಹಸಿವಿನಿಂದ ಕಳೆಯಬೇಕಾಗಿದೆ. ಇದರ ಅರ್ಥ, 200 ಜನರು ಭಾರತಕ್ಕೆ ಭಾರವಾಗಿದ್ದಾರೆ ಎಂದಲ್ಲ ಅಥವಾ ಅವರನ್ನು ಇಲ್ಲವಾಗಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಒಬ್ಬನ ತಟ್ಟೆಯಲ್ಲಿರುವ 200 ಜನರು ಉಣ್ಣುವ ಅನ್ನ ಸಮಾನವಾಗಿ ಹಂಚಿಕೆಯಾಗಬೇಕು. ಭಾರತದಲ್ಲಿ ಸಂಪನ್ಮೂಲದ ಸಮಾನ ಹಂಚಿಕೆಯ ಸಣ್ಣ ಪ್ರಯತ್ನ ನಡೆದರೂ ಈಗ ಇರುವ ಭಾರತದ ಜನಸಂಖ್ಯೆ ದೇಶದ ಪಾಲಿನ ಅತಿ ದೊಡ್ಡ ಆಸ್ತಿಯಾಗಿ ಬದಲಾಗುತ್ತದೆ.

‘ಒಬ್ಬನಿಗೆ ಒಂದೇ ಮಗು’ ಎಂಬ ನೀತಿಯಿಂದ ಚೀನಾ ಕೂಡ ಇತ್ತೀಚೆಗೆ ಹಿಂದೆ ಸರಿದಿದೆ. ಈ ನೀತಿಯಿಂದಾಗಿ ಚೀನಾದಲ್ಲಿ ವೃದ್ಧರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಯಿತು. ಯುವಕರ ಸಂಖ್ಯೆಯಲ್ಲಿ ಇಳಿಕೆಯಾಯಿತು. ಯೌವನ ಒಂದು ದೇಶದ ದೊಡ್ಡ ಆಸ್ತಿ. ಅವರ ಸಂಖ್ಯೆಯಲ್ಲಿ ಇಳಿಕೆಯಾದರೆ ಆ ದೇಶ ತನ್ನ ದೈಹಿಕ ಸಾಮರ್ಥ್ಯವನ್ನೇ ಕಳೆದುಕೊಂಡು ತೆವಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವೃದ್ಧರು ಮತ್ತು ಯುವಕರ ನಡುವೆ ಸಮತೋಲನ ಅತ್ಯಗತ್ಯ. ಇದನ್ನು ಕಂಡುಕೊಂಡೇ ಚೀನಾ ತನ್ನ ನೀತಿಯಿಂದ ಹಿಂದೆ ಸರಿಯಿತು. ಚೀನಾದಂತೆ ಭಾರತ ಬಲಿಷ್ಠವೂ ಅಲ್ಲ, ಶ್ರೀಮಂತವೂ ಅಲ್ಲ, ಭಾರತದಲ್ಲಿ ಜನಸಂಖ್ಯಾ ನೀತಿ ಜಾರಿಗೊಂಡರೆ ಅದು ದೇಶವನ್ನು ಬೃಹತ್ ವೃದ್ಧಾಶ್ರಮವಾಗಿ ಪರಿವರ್ತನೆ ಮಾಡಲಿದೆ. ದೇಶದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಲಿದೆ. ಉತ್ತರ ಪ್ರದೇಶದ ಜನಸಂಖ್ಯಾ ನೀತಿ ಹತ್ತು ಹಲವು ಅಪಾಯಗಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ. ಮುಖ್ಯವಾಗಿ ಅದು ಸುರಕ್ಷಿತ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಭಾರತ ಭ್ರೂಣ ಹತ್ಯೆಗಾಗಿ ವಿಶ್ವದಲ್ಲೇ ಕುಖ್ಯಾತವಾಗಿದೆ. ಭವಿಷ್ಯದಲ್ಲಿ ಈ ನೀತಿಯ ಮರೆಯಲ್ಲೇ ಗರ್ಭದಲ್ಲಿರುವ ಹೆಣ್ಣು ಮಕ್ಕಳ ಕಗ್ಗೊಲೆಗಳು ನಡೆಯಬಹುದು. ಗರ್ಭ ನಿರೋಧಕಗಳ ಕುರಿತಂತೆ ದೊಡ್ಡ ಪ್ರಮಾಣದ ಅಜ್ಞಾನವನ್ನು ಈ ದೇಶದ ಜನರು ಹೊಂದಿದ್ದಾರೆ. ಇಲ್ಲಿ ಮಕ್ಕಳು ಆಕಸ್ಮಿಕವಾಗಿ ಹುಟ್ಟುವುದೇ ಅಧಿಕ. ಅಂತಹ ಮಕ್ಕಳನ್ನು ಕದ್ದು ಮುಚ್ಚಿ ಕೊಲ್ಲಬೇಕಾದಂತಹ ಅನಿವಾರ್ಯ ಸ್ಥಿತಿಗೆ ಪಾಲಕರು ಸಿಲುಕಿಕೊಳ್ಳಬಹುದು. ಭಾರತದಲ್ಲಿ ಅನಾಥ ಬೀದಿ ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಈ ನೀತಿ ಜಾರಿಗೊಂಡಲ್ಲಿ, ಅತಿ ದೊಡ್ಡ ವೃದ್ಧರ ದೇಶವಾಗಿ ಮಾತ್ರವಲ್ಲ, ಅತಿ ದೊಡ್ಡ ಅನಾಥ ಮಕ್ಕಳ ದೇಶವಾಗಿಯೂ ಗುರುತಿಸಿಕೊಳ್ಳಬೇಕಾದೀತು. ಮೂರು ಮಕ್ಕಳನ್ನು ಹೊಂದಿದ ವ್ಯಕ್ತಿಗೆ ಸವಲತ್ತು, ಸರಕಾರಿ ಸೌಲಭ್ಯಗಳನ್ನು ನೀಡುವುದಿಲ್ಲ ಎನ್ನುವುದರಿಂದ ದೇಶಕ್ಕೇನು ಲಾಭವಾಯಿತು? ಆ ಮೂರನೇ ಮಗು ಮನೆಯವರಿಗಷ್ಟೇ ಅಲ್ಲ, ಸಮಾಜಕ್ಕೂ ಹೊರೆಯಾಗಿ ಬದುಕಬೇಕಾಗುತ್ತದೆ.

ಸರಕಾರದ ಸವಲತ್ತುಗಳಿಂದ ವಂಚಿತವಾಗಿ ಬೆಳೆಯುವ ಮಗು ಅನಕ್ಷರತೆ, ಅಪೌಷ್ಟಿಕತೆ, ಅನಾರೋಗ್ಯ ಮೊದಲಾದವುಗಳಿಂದ ನರಳಿದರೆ, ಅಂತಹ ದೊಡ್ಡ ಸಂಖ್ಯೆಯ ಮಕ್ಕಳು ನಮ್ಮ ನಡುವೆ ಬದುಕ ತೊಡಗಿದರೆ ದೇಶಕ್ಕೆ ನಷ್ಟವೇ ಅಲ್ಲವೇ? ಇಷ್ಟಕ್ಕೂ ಮೂರನೆಯ ಮಗುವಿನ ಹುಟ್ಟಿನಲ್ಲಿ ಆ ಮಗುವಿನ ಯಾವ ಅಪರಾಧವೂ ಇಲ್ಲ. ಪಾಲಕರ ಅಪರಾಧಕ್ಕಾಗಿ ಆ ಮಗುವೂ ದಂಡನೆಯನ್ನು ಅನುಭವಿಸುವುದು ಎಷ್ಟು ಸರಿ? ದೇಶದಲ್ಲಿ ಜನಸಂಖ್ಯೆ ಇಳಿಕೆಯಾಗಬೇಕು ಎನ್ನುವುದು ನಿಜ. ಹಾಗೆಂದು ಕಾನೂನಿನ ಮೂಲಕ ಅದನ್ನು ಜಾರಿಗೊಳಿಸಲು ಹೊರಡುವುದು ಭಾರತದಂತಹ ದೇಶದಲ್ಲಿ ತಪ್ಪು ಪರಿಣಾಮಗಳನ್ನು ಸೃಷ್ಟಿಸಬಹುದು ಎಂದು ಈಗಾಗಲೇ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಇಂದು ನಗರ ಪ್ರದೇಶದಲ್ಲಿ ಎಲ್ಲ ಧರ್ಮ, ಜಾತಿಗೆ ಸೇರಿದ ಪಾಲಕರು ಸಣ್ಣ ಕುಟುಂಬದ ಕುರಿತು ಆಸಕ್ತರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಷ್ಟೇ ತಾಯಂದಿರು ಹೆಚ್ಚಿನ ಮಕ್ಕಳನ್ನು ಹೆರುತ್ತಿದ್ದಾರೆ. ಮುಸ್ಲಿಮರಲ್ಲೂ ಮಕ್ಕಳನ್ನು ಹೆರುವ ಫಲವತ್ತತೆಯಲ್ಲಿ ಇಳಿಕೆಯಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಸಣ್ಣ ಕುಟುಂಬದ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ಅದಕ್ಕೆ ಪೂರಕವಾದ ಯೋಜನೆಗಳನ್ನು ಜನಪ್ರಿಯಗೊಳಿಸುವುದು, ಜೊತೆಗೆ ಹತ್ತು ಮಕ್ಕಳನ್ನು ಹೆರಲು ಸಾರ್ವಜನಿಕ ವೇದಿಕೆಗಳಲ್ಲಿ ಕರೆ ನೀಡುವ ಧಾರ್ಮಿಕ ನಾಯಕರ ಮೇಲೆ ಮೊಕದ್ದಮೆ ದಾಖಲಿಸುವುದು ಮೊದಲಾದ ಕ್ರಮಗಳ ಮೂಲಕ ಜನಸಂಖ್ಯೆಯನ್ನು ಇಳಿಸುವ ಪ್ರಯತ್ನ ನಡೆಯಬೇಕು. ಇದೇ ಸಂದರ್ಭದಲ್ಲಿ ಸಂಪನ್ಮೂಲಗಳ ಸಮಾನ ಹಂಚಿಕೆಯಾಗುವ ಮೂಲಕ ಎಲ್ಲರಿಗೂ ಆರೋಗ್ಯ, ಶಿಕ್ಷಣ, ಆಹಾರ, ವಸತಿ ದೊರೆಯುವಂತೆ ನೋಡಿಕೊಂಡರೆ ಇರುವ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸಿ ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News